ಬೆಂಗಳೂರು: ಕೊರೊನಾ ಮಹಾಮಾರಿಯ ಆರ್ಥಿಕ ಬಿಕ್ಕಟ್ಟಿನಿಂದ ಕಾರ್ಮಿಕರಿಗೆ ದಸರಾ ಹಬ್ಬದ ಬೋನಸ್ ಕೊಡಲಾಗದ ಸಂಕಷ್ಟಕ್ಕೆ ರಾಜ್ಯದ ಕೈಗಾರಿಕೋದ್ಯಮಿಗಳು ಸಿಲುಕಿದ್ದಾರೆ.
ಪ್ರತಿ ವರ್ಷ ಕಾರ್ಮಿಕರಿಗೆ ಮಾಲೀಕರು ಆಯುಧ ಪೂಜೆ ನಂತರ ಬೋನಸ್ ನೀಡಿ ಸಿಹಿ ಹಂಚುವುದು ವಾಡಿಕೆ. ಈ ಬಾರಿ ಆರ್ಥಿಕವಾಗಿ ಮುಗ್ಗರಿಸಿರುವ ಕಾರ್ಖಾನೆಗಳು ಬೋನಸ್ ಇರಲಿ, ಸಂಬಳ ನೀಡುವುದೇ ಹೆಚ್ಚು ಎಂಬ ಸ್ಥಿತಿಗೆ ತಲುಪಿದೆ. ಲಾಕ್ಡೌನ್, ಅಂತಾರಾಷ್ಟ್ರೀಯ ಮಾರುಕಟ್ಟೆ ಕುಸಿತ ರಾಜ್ಯದ ಕೈಗಾರಿಕೆಗಳಿಗೆ ಹೊಡೆತ ನೀಡಿವೆ.
ಈ ಕುರಿತು ಪೀಣ್ಯ ಕೈಗಾರಿಕಾ ಸಂಘದ ಖಜಾಂಚಿ ವಿಜಯ್ ಕುಮಾರ್ ಮಾತನಾಡಿ, ಈ ಬಾರಿಯ ದಸರಾ ಆಚರಣೆ ಪ್ರತಿ ವರ್ಷದಂತಿಲ್ಲ. ಪ್ರತಿ ಬಾರಿ ಕೈಗಾರಿಕೆಯ ಸಿಬ್ಬಂದಿ ಸಂಭ್ರಮದಿಂದ ಆಚರಣೆ ಮಾಡುವ ಈ ಹಬ್ಬ. ಕೊರೊನಾ ಮಹಾಮಾರಿಯಿಂದ ಆಚರಣೆ ಹಿಂದಿನಂತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪೂಜೆ ದೀಪಾವಳಿಗೆ ಮುಂದೂಡಿಕೆ:
ಸಾಮಾನ್ಯವಾಗಿ ನವರಾತ್ರಿಯ ಆಯುಧ ಪೂಜೆಗೆ ಮಾಡಲಾಗುವ ವಾರ್ಷಿಕ ಪೂಜೆ, ಈ ವರ್ಷ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ದೀಪಾವಳಿಯ ಅಮಾವಾಸ್ಯೆಗೆ ಮುಂದೂಡಿದ್ದಾರೆ. ಬೋನಸ್ ಸಿಗುವುದು ಕಷ್ಟವಾಗಿದ್ದು, ಆರ್ಥಿಕ ಪರಿಸ್ಥಿತಿ ಸುಧಾರಣೆ ಆದರೆ, ಜನವರಿಯಲ್ಲಿ ಸಿಗೋ ಸಾಧ್ಯತೆಯಿದೆ.