ಬೆಂಗಳೂರು: ರಾಜ್ಯದ ಇತಿಹಾಸದಲ್ಲಿ ನೈತಿಕತೆಯನ್ನು ಕಳೆದುಕೊಂಡ ಸರ್ಕಾರ ಯಾವುದೂ ಇರಲಿಲ್ಲ. ಇದೊಂದು ಅನೈತಿಕ ಸರ್ಕಾರ ಆಗಿರುವುದರಿಂದ ನಾವು ಬಜೆಟ್ ಬಹಿಷ್ಕರಿಸಬೇಕಾಯಿತು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಈ ಅನೈತಿಕ ಸರ್ಕಾರದ ಬಜೆಟ್ ಅನ್ನು ನಾವು ಕೇಳಿಸಿಕೊಳ್ಳುವುದು ಬೇಡ, ಅವರ ಸುಳ್ಳನ್ನ ಕೇಳುವುದು ಬೇಡ, ರಾಜ್ಯ ಹಾಳು ಮಾಡುವ ವಿಚಾರವನ್ನು ನಾವು ಕೇಳುವುದು ಬೇಡ ಎಂದು ನಿರ್ಧರಿಸಿ ಸಭಾತ್ಯಾಗ ಮಾಡಿದೆವು ಎಂದರು.
ರಮೇಶ್ ಜಾರಕಿಹೊಳಿ ಅವರ ತೇಜೋವಧೆ ಮಾಡಲಾಗಿದೆ, ನಮ್ಮದೂ ತೇಜೋವಧೆ ಆಗಬಾರದು ಎಂಬ ಕಾರಣ ನೀಡಿ ಆರು ಮಂದಿ ಸಚಿವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಯಾಕೆ ಇವರ ತೇಜೋವಧೆ ಮಾಡುತ್ತಾರೆ? ಇವರು ಒಳ್ಳೆಯವರಲ್ಲವಾ? ಇವರ ಬಳಿ ಸಿಡಿ ಇದೆ ಎಂದು ನಾನು ಹೇಳಿಲ್ಲ. 19 ಸಿಡಿಗಳಿವೆ ಎಂದು ಇವರೇ ನಂಬರ್ ಸಹ ಹೇಳಿಬಿಟ್ಟಿದ್ದಾರೆ ಎಂದು ವಂಗ್ಯವಾಡಿದರು.
ಕಾಂಗ್ರೆಸ್ನವರು ತಮ್ಮ ವಿರುದ್ಧ ಪಿತೂರಿ ಮಾಡುತ್ತಾರೆ ಎಂಬ ಕಾರಣಕ್ಕೆ ಕೋರ್ಟ್ ಮೊರೆ ಹೋಗಿದ್ದಾರೆ ಎಂದರೆ, ಅವರ ಬಳಿ ಸಿಡಿ ಇದೆ ಎಂದು ಅರ್ಥ ಅಲ್ಲವೇ? ಪಿತೂರಿ ಆಗಿದೆ ಅಂದರೆ ಅಲ್ಲಿ ಸಿಡಿ ಇರಬೇಕಲ್ಲವೇ. ಯಾವುದೇ ಸಿಡಿ ಇಲ್ಲ ಎಂದಾದರೆ ಕೋರ್ಟ್ ಮೊರೆ ಹೋಗುವುದು ಯಾಕೆ.. ಆರಾಮಾಗಿ ಮನೆಯಲ್ಲಿ ಇರಬಹುದಲ್ಲವೇ ಎಂದರು.
ಇದನ್ನೂ ಓದಿ.. ಆಯವ್ಯಯ ಮಂಡನೆ ಬಳಿಕ ಸಿಎಂ ಹೇಳಿದ್ದೇನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..
ರಾಜ್ಯದಿಂದ 25 ಸಂಸದರನ್ನು ಕಳಿಸಿದ್ರು. ಇವರು ಯಾವತ್ತೂ ಕೇಂದ್ರದ ಮುಂದೆ ಕೇಳಲೇ ಇಲ್ಲ. ಜಿಎಸ್ಟಿ ರಾಜ್ಯದ ಪಾಲಿನ ಹಣವೂ ಬರಲಿಲ್ಲ. ಎಕ್ಸೈಜ್ ಡ್ಯೂಟಿ ಕಡಿಮೆಗೆ ಒತ್ತಡ ಹಾಕಬಹುದಿತ್ತು. ಕೇಂದ್ರದ ಮೇಲೆ ಸೆಸ್ ಹಾಕದಂತೆ ಒತ್ತಡ ಹಾಕಬೇಕಿತ್ತು. ಇವರು ಯಾವ ಒತ್ತಡವನ್ನೂ ಹಾಕ್ತಿಲ್ಲ. ಕೇಂದ್ರ ಹೇಳೋದನ್ನೆಲ್ಲ ಒಪ್ಪಿಕೊಂಡು ಹೋಗ್ಬೇಕು. ರಾಜ್ಯಕ್ಕೆ ಅನ್ಯಾಯವಾದ್ರೆ ಪ್ರತಿಭಟಿಸುವ ತಾಕತ್ ಬೇಕು. ಗ್ರಾಂಟ್ಸ್ ಇಲ್ಲ, ತೆರಿಗೆ ಪಾಲಿಲ್ಲ ಯಾವುದೂ ಇಲ್ಲ. ಇದನ್ನ ಜನಪರ ಬಜೆಟ್ ಅಂತ ನಾವು ಕರೆಯಬೇಕಾ? ಇದು ಜನವಿರೋಧಿ, ಪಾರದರ್ಶಕವಿಲ್ಲದ ಬಜೆಟ್. ಗೊತ್ತುಗುರಿಯಿಲ್ಲದ ಬಜೆಟ್ ಎಂದರು.