ಬೆಂಗಳೂರು: ಪರಮೇಶ್ವರ್ ಅವರ ಪಿಎ ರಮೇಶ್ ಸಾವಿಗೆ ಐಟಿ ಅಧಿಕಾರಿಗಳೇ ಕಾರಣ. ನೈತಿಕವಾಗಿ ಈ ಸಾವಿನ ಜವಾಬ್ದಾರಿಯನ್ನ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೊರಬೇಕು ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಒತ್ತಾಯಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಮೇಶ್ ಆತ್ಮಹತ್ಯೆಯ ನೈತಿಕ ಹೊಣೆಯನ್ನು ಯಾರು ಹೊರುತ್ತಾರೆ? ನಿರ್ಮಲಾ ಸೀತಾರಾಮನ್ ಹೊರುತ್ತಾರಾ? ಇವತ್ತು ಅವರ ಕುಟುಂಬವನ್ನು ಬೀದಿಗೆ ತಳ್ಳಿದ್ದೀರಿ. ಐಟಿ ಅಧಿಕಾರಿಗಳು ರಮೇಶ್ ಮನೆಗೆ ಹೋಗಿಲ್ಲ ಅಂತಾರೆ. ಆದರೆ, ರಮೇಶ್ ಮನೆಯ ಸಿಸಿಟಿವಿಯಲ್ಲಿ ಅವರು ಹೋಗಿರುವ ದೃಶ್ಯ ಇದೆ. ರಮೇಶ್ ಮೃತ ಪಟ್ಟಿರುವುದಕ್ಕೆ ಪರಿಹಾರ ರೂಪದಲ್ಲಿ ಐಟಿ ಅಧಿಕಾರಿಗಳು 1 ಕೋಟಿ ರೂ. ಕೊಡಬೇಕು. ರಮೇಶ್ ಮಕ್ಕಳ ವಿದ್ಯಾಭ್ಯಾಸವನ್ನ ಕೇಂದ್ರ ಸಚಿವೆಯೇ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜಕೀಯ ಉದ್ದೇಶದಿಂದ ಜಿಲ್ಲೆಯ ಬೇಡಿಕೆ: ಹೆಚ್.ವಿಶ್ವನಾಥ್ ಅವರು ರಾಜಕೀಯ ಉದ್ದೇಶದಿಂದ ಹುಣಸೂರು ಹೊಸ ಜಿಲ್ಲೆ ರಚನೆಯ ಬೇಡಿಕೆ ಇಟ್ಟಿದ್ದಾರೆ. ವಿಶ್ವನಾಥ್ ಈ ಮುಂಚೆ ಮಂತ್ರಿಗಳಾಗಿದ್ದರು, ಜೆಡಿಎಸ್ ರಾಜ್ಯಾಧ್ಯಕರಾಗಿದ್ದವರು. ಇಲ್ಲಿ ತನಕ ಹೊಸ ಜಿಲ್ಲೆಯ ದನಿ ಎತ್ತದವರು ಈಗ ಏಕಾಏಕಿ ಜ್ಞಾನೋದಯ ಆಗಿರುವುದು ಹೇಗೆ? ಉಪ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಸೋಲುವ ಭೀತಿಯಿಂದ ಈಗ ಹೊಸ ಜಿಲ್ಲೆಯ ಮಾತುಗಳನ್ನಾಡುತ್ತಿದ್ದಾರೆ ಎಂದು ಆರೋಪಿಸಿದ ಉಗ್ರಪ್ಪ, ಹೊಸ ಜಿಲ್ಲೆ ಆಗಬೇಕಾದರೆ ಆ ಭಾಗದ ಜನರ ಜನಾಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳಬೇಕು ಎಂದು ತಿಳಿಸಿದರು.