ಬೆಂಗಳೂರು: ನಕಲಿ ಭಾರತೀಯ ಕರೆನ್ಸಿ ಜಾಲ ನಡೆಸುತ್ತಿದ್ದ ಇಬ್ಬರು ಆರೋಪಿಗಳಿಗೆ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯ 15 ಸಾವಿರ ರೂ. ದಂಡ ಸಹಿತ 6 ವರ್ಷ ಸಜೆ ವಿಧಿಸಿದೆ.
ಗಂಗಾಧರ್ ಖೋಲ್ಕರ್ ಹಾಗೂ ಸಬೀರುದ್ದೀನ್ ಶಿಕ್ಷೆಗೆ ಗುರಿಯಾದ ಆರೋಪಿಗಳು. ನಕಲಿ ಭಾರತೀಯ ಕರೆನ್ಸಿ ಜಾಲದ ವಿರುದ್ಧ ಕಾರ್ಯಾಚರಣೆ ನಡೆಸಿದ್ದ ಎನ್ಐಎ ತಂಡ 2018ರಲ್ಲಿ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಿ, ಆರೋಪಿಗಳಿಂದ 2 ಸಾವಿರ ರೂ. ಮುಖಬೆಲೆಯ 6.84 ಲಕ್ಷ ನಕಲಿ ಹಣ ಜಪ್ತಿ ಮಾಡಿತ್ತು. ಈ ಸಂಬಂಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ವೇಳೆ ಪ.ಬಂಗಾಳದ ಮಾಲ್ಡಾ ಮೂಲದ ಆರೋಪಿಗಳು ಸೇರಿದಂತೆ ಮೊಹಮ್ಮದ್ ಸಜ್ಜಾದ್ ಅಲಿ, ಎಂ.ಜಿ. ರಾಜು, ಗಂಗಾಧರ್ ಖೋಲ್ಕರ್, ವನಿತಾ, ಅಬ್ದುಲ್ ಖಾದರ್, ಸಬೀರುದ್ದೀನ್ ಹಾಗೂ ವಿಜಯ್ ಹೀಗೆ ಒಟ್ಟು 7 ಜನರನ್ನು ಎನ್ಐಎ ಬಂಧಿಸಿ, ವಿಚಾರಣೆಗೊಳಪಡಿಸಿತ್ತು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾಧರ್ ಖೋಲ್ಕರ್ ಹಾಗೂ ಸಬೀರುದ್ದೀನ್ಗೆ ಸಜೆಯಾಗಿದ್ದು ಇನ್ನುಳಿದ ಆರೋಪಿಗಳ ವಿರುದ್ಧ ಎನ್ಐಎ ತನಿಖೆ ಮುಂದುವರೆದಿದೆ.