ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹೊಸ ವರ್ಷ ಸಂಭ್ರಮಾಚರಣೆ ನಿನ್ನೆ ಅದ್ದೂರಿಯಾಗಿ ಜರುಗಿತು. ಆದರೆ, ಈ ವೇಳೆ ಕೆಲವು ಅಹಿತಕರ ಘಟನೆಗಳೂ ನಡೆದಿವೆ.
ನೂತನ ವರ್ಷದ ಸಂಭ್ರಮದಲ್ಲಿ ಹಲ್ಲೆ ಪ್ರಕರಣಗಳು ಸಂಭವಿಸುತ್ತಿವೆ. ಎಂ.ಜಿ.ರಸ್ತೆ, ಚರ್ಚ್ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್ ಸೇರಿದಂತೆ ಹಲವೆಡೆ ಸಾಕಷ್ಟು ದೌರ್ಜನ್ಯ ಪ್ರಕರಣಗಳು ನಡೆದಿವೆ. ಇಂಥ ಘಟನೆಗಳು ಹಿಂದೆಯೂ ನಡೆದಿವೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು.
ಇಂದು ಬೆಳಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಧವಳಗಿರಿ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಇನ್ಮುಂದೆ ಈ ಪ್ರದೇಶಗಳಲ್ಲಿ ಹೊಸ ವರ್ಷ ಆಚರಿಸಬೇಕಾ? ಬೇಡವಾ? ಎಂಬ ಬಗ್ಗೆ ಯೋಚನೆ ಮಾಡಬೇಕಿದೆ. ಈ ಕುರಿತು ಸಿಎಂ ಮತ್ತು ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಹೊಸ ವರ್ಷಾಚರಣೆ ವೇಳೆ ಎಂ.ಜಿ. ರಸ್ತೆ, ಚರ್ಚ್ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್ ಈ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿವೆ. ಇದರಿಂದ ನಮಗೆ ಮುಜುಗರ ಆಗುತ್ತದೆ. ಇದಕ್ಕೆ ಬದಲಾವಣೆ ತರಬೇಕು. ವರ್ಷಾಚರಣೆಗೆ ಪರ್ಯಾಯ ವ್ಯವಸ್ಥೆ ಮಾಡಬೇಕಿದೆ ಎಂದು ಹೇಳಿದರು.