ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆ ಬೈಕ್ ಸವಾರರಿಗೆ ಶಾಕ್ ನೀಡಿದ್ದು, ಸಂಚಾರಿ ನಿಯಮ ಉಲ್ಲಂಘನೆ ಮಾಡುವ ಬೈಕ್ ಸವಾರರ ಮೇಲೆ ಮತ್ತಷ್ಟು ಗದಾಪ್ರಹಾರ ಮಾಡಲು ಮುಂದಾಗಿದ್ದು, ಹೊಸ ಆದೇಶ ಹೊರಡಿಸಿದೆ.
ದ್ವಿಚಕ್ರ ವಾಹನ ಸವಾರರು ಇನ್ಮುಂದೆ ಹೆಲ್ಮೆಟ್ ಹಾಕದೇ ರಸ್ತೆಗಿಳಿದರೆ ಚಾಲನಾ ಪರವಾನಗಿಯನ್ನು ಅಮಾನತು ಮಾಡಲಾಗುತ್ತದೆ. ಹಿಂಬದಿ ಸವಾರರು ಹಾಗೂ ನಾಲ್ಕು ವರ್ಷ ಮೇಲ್ಪಟ್ಟ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ.
ರೂಲ್ಸ್ ಬ್ರೇಕ್ ಮಾಡಿದ್ದರೆ ದಂಡ ಮಾತ್ರವಲ್ಲದೇ ಮೂರು ತಿಂಗಳ ಕಾಲ ಡಿಎಲ್ ಅಮಾನತು ಮಾಡಲಾಗುತ್ತದೆ ಎಂದು ಕೇಂದ್ರ ಮೋಟಾರು ಕಾಯ್ದೆ 1988ರ ಕಲಂ 194ಡಿ ಅನ್ವಯ ಸಾರಿಗೆ ಇಲಾಖೆ ಆದೇಶ ಹೊರಡಿಸಲಾಗಿದೆ.
ರಸ್ತೆ ಸುರಕ್ಷತಾ ಸಮಿತಿಯು ಅಕ್ಟೋಬರ್ 10ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಇತರೆ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ವಿಡಿಯೋ ಸಂವಾದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನಗರದಲ್ಲಿ ರಸ್ತೆ ಅಪಘಾತಗಳು ಹೆಚ್ಚು ಸಂಭವಿಸುತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚಾಗಿದೆ. ಇಂತಹ ಘಟನೆಗಳನ್ನು ತಡೆಯಲು ಈ ಹೊಸ ನಿಯಮ ಜಾರಿಗೆ ತರಲಾಗಿದೆ.