ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ತೀವ್ರವಾಗಿ ಹೆಚ್ಚಾಗುತ್ತಿದೆ. ಈ ಮಧ್ಯೆ ಹೈ ರಿಸ್ಕ್ ದೇಶಗಳಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಒಮಿಕ್ರಾನ್ ಸೋಂಕು ಕಾಣಿಸಿಕೊಳ್ಳುತ್ತಿದೆ.
ಹೀಗಾಗಿ, ಹೈ ರಿಸ್ಕ್ ದೇಶಗಳಿಂದ ಹಾಗೂ ಹೈ ರಿಸ್ಕ್ ಅಲ್ಲದ ದೇಶಗಳಿಂದ ಬರುವ ಎಲ್ಲ ಪ್ರಯಾಣಿಕರಿಗೂ ವಿಮಾನ ನಿಲ್ದಾಣದಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಪರೀಕ್ಷೆ ವೇಳೆ ಪಾಸಿಟಿವ್ ದೃಢಪಟ್ಟರೆ ಅಂತಹವರಿಗೆ ಹೋಂ ಐಸೋಲೇಷನ್ ನಿರ್ಬಂಧಿಸಿದ್ದು, ಚಿಕಿತ್ಸೆಗಾಗಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತಿದೆ.
ಈ ಮಧ್ಯೆ ಪಾಸಿಟಿವ್ ಬಂದ ಶೇ.90 ಕ್ಕಿಂತ ಹೆಚ್ಚು ರೋಗಿಗಳು ಯಾವುದೇ ಸೋಂಕಿನ ಲಕ್ಷಣಗಳನ್ನು ಹೊಂದಿಲ್ಲ ಹಾಗೂ ಸೌಮ್ಯ ರೋಗಲಕ್ಷಣಗಳೊಂದಿಗೆ 1-3 ದಿನಗಳಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಕೋವಿಡ್-19 ಪಾಸಿಟಿವ್‌ಗಳ ಸಂಖ್ಯೆ ಹೆಚ್ಚುತ್ತಿರುವ ಪ್ರಸ್ತುತ ಸನ್ನಿವೇಶವನ್ನು ಪರಿಗಣಿಸಿ, ಆಸ್ಪತ್ರೆಯ ಬೆಡ್‌ಗಳನ್ನು ಲಕ್ಷಣರಹಿತ ಮತ್ತು ಸೌಮ್ಯ ರೋಗಲಕ್ಷಣಗಳ ಬದಲಿಗೆ ಮಧ್ಯಮ ಮತ್ತು ತೀವ್ರತರವಾದ ಪ್ರಕರಣಗಳಿಗೆ ಬಳಸಬೇಕಾಗಿದೆ.
ಈ ನಿಟ್ಟಿನಲ್ಲಿ ಮೇಲಿನ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಹೆಚ್ಚು ಅಪಾಯದ ದೇಶಗಳಿಂದ ಬರುವ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರಿಗಾಗಿ ಸರ್ಕಾರಿ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಉಚಿತವಾಗಿ ಇರಬಹುದಾಗಿದೆ. ಆದರೆ ಈಗಾಗಲೇ ಗೊತ್ತುಪಡಿಸಿದ ಕಟ್ಟಡಗಳಲ್ಲಿ ಲಕ್ಷಣರಹಿತ ಮತ್ತು ಸೌಮ್ಯ ರೋಗಲಕ್ಷಣದ ಸೋಂಕಿತರು ಇರಬಹುದು.
ಇನ್ನು ಸೋಂಕಿತರು ಸರ್ಕಾರಿ ಸಿಸಿಸಿ ನಿರಾಕರಿಸಿದರೆ ಬಜೆಟ್ ಹೋಟೆಲ್‌ಗಳು, 3 ಸ್ಟಾರ್ ಮತ್ತು 5 ಸ್ಟಾರ್ ಹೋಟೆಲ್‌ಗಳನ್ನು ಗುರುತಿಸಲಾಗಿದೆ. ಪ್ರಯಾಣಿಕರಿಗೆ ಪಾವತಿ ಆಧಾರದ ಮೇಲೆ ಸೌಲಭ್ಯಗಳು ಖಾಸಗಿ ಕೋವಿಡ್ ಕೇರ್ ಸೆಂಟರ್‌ನಲ್ಲಿ ಸಾಂಸ್ಥಿಕ ಕ್ವಾರಂಟೈನ್ ಆಗಬಹುದು. ಒಂದು ವೇಳೆ ಕೋವಿಡ್ ಕೇರ್ ಸೆಂಟರ್‌ನಲ್ಲಿರುವಾಗ ರೋಗದ ತೀವ್ರತೆ ಹೆಚ್ಚಾದರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತೆ.
ಎಷ್ಟು ದಿನ ಸಾಂಸ್ಥಿಕ ಕ್ವಾರಂಟೈನ್?
ಕೋವಿಡ್ ಕೇರ್ ಸೆಂಟರ್ ಅಥವಾ ಆಸ್ಪತ್ರೆಯಲ್ಲಿ ಉಳಿಯುವ ಅವಧಿಯು 7 ದಿನಗಳವರೆಗೆ ಇರಲಿದೆ. ಹಿಂದಿನ 3 ದಿನಗಳಲ್ಲಿ ಸೋಂಕಿತನಿಗೆ ಜ್ವರ ಇಲ್ಲದೇ ಇದ್ದರೆ, ಉಸಿರಾಟದ ಸಮಸ್ಯೆ ಇಲ್ಲದೇ ಮತ್ತು ಆಮ್ಲಜನಕ ಪ್ರಮಾಣ ಶೇ.94ರಷ್ಟು ಇದ್ದರೆ 7ನೇ ದಿನದಂದು ಬಿಡುಗಡೆ ಮಾಡಬಹುದು.
ಇದನ್ನೂ ಓದಿ: ರಾಜ್ಯದ ಶೇ 85ಕ್ಕೂ ಹೆಚ್ಚು ಕೋವಿಡ್ ಕೇಸ್ ಬೆಂಗಳೂರಲ್ಲಿ ಪತ್ತೆ: ಶೇ 7.5ಕ್ಕೇರಿದ ಪಾಸಿಟಿವಿಟಿ ದರ