ಬೆಂಗಳೂರು: ಫೇಸ್ಬುಕ್ನಲ್ಲಿ ಯಾವುದಾದರು ವಸ್ತು ಕುರಿತು ಪೋಸ್ಟ್ ಮಾಡುವ ಮುನ್ನ ಬಹಳ ಎಚ್ಚರಿಕೆಯಿಂದ ಇರಬೇಕು. ಯಾಕಂದ್ರೆ ಸಿಲಿಕಾನ್ ಸಿಟಿಗೆ ವಂಚನೆ ಜಾಲ ಎಂಟ್ರಿ ಕೊಟ್ಟಿದ್ದು, ಗೂಗಲ್ ಪೇ ಬಳಸುವ ಮೊಬೈಲ್ ಗ್ರಾಹಕರನ್ನೇ ಟಾರ್ಗೆಟ್ ಮಾಡಿದೆ. ಈ ವಂಚಕರು ಡೆಬಿಟ್, ಕ್ರೆಡಿಟ್ ಕಾರ್ಡ್, ಓಟಿಪಿ ನಂಬರ್ ಕೇಳಿ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಅಶೋಕ್ ನಗರದ ನಿವಾಸಿ ಪುನೀತ್ ಎಂಬುವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬೈಕ್ ಮಾರಾಟ ಇರುವುದಾಗಿ ಪೋಸ್ಟ್ ಹಾಕಿ ಮೊಬೈಲ್ ನಂಬರ್ ಹಾಕಿದ್ದರು. ಈ ವೇಳೆ ಕರೆ ಮಾಡಿದ್ದ ಆರೋಪಿ ವಿಕಾಸ್ ಪಟೇಲ್ ಎಂಬ ವ್ಯಕ್ತಿ ತಾನು ಸೇನೆಯಲ್ಲಿ ಕೆಲಸ ಮಾಡುತ್ತಿದ್ದು, ದೇವನಹಳ್ಳಿ ಬಳಿ ವಾಸ ಮಾಡುತ್ತಿದ್ದೇನೆ. ನಿಮ್ಮ ಬೈಕ್ ಖರೀದಿಸುತ್ತೇನೆ ಎಂದು ಹೇಳಿ ಗೂಗಲ್ ಪೇ ಮೂಲಕ ಕ್ಯೂ ಆರ್ ಕೋಡ್ ಕಳುಹಿಸಿ ಕೊಟ್ಟಿದ್ದಾರೆ.
ಈ ವೇಳೆ ಅದನ್ನ ಪುನೀತ್ ಸ್ಕ್ಯಾನ್ ಮಾಡಿದಾಗ ಹಣ ಬರುವ ಬದಲು ಪುನೀತ್ ಅವರ ಅಕೌಂಟ್ ನಿಂದ ಹಣ ಆರೋಪಿಗೆ ಡೆಬಿಟ್ ಆಗಿದೆ. ಇನ್ನು ಪುನೀತ್ ತಕ್ಷಣ ಬ್ಯಾಂಕ್ಗೆ ಹೋಗಿ ನೋಡಿದಾಗ ಆತನ ನಿಜವಾದ ಹೆಸರು ಪರಂಜಿತ್ ಸಿಂಗ್ ಎಂದು ಗೊತ್ತಾಗಿದೆ. ಅಲ್ಲದೆ, ಆತ ಮೋಸ ಮಾಡಿರುವ ವಿಚಾರ ತಿಳಿದು ಬಂದಿದೆ. ತಕ್ಷಣ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪುನೀತ್ ದೂರು ದಾಖಲಿಸಿದ್ದಾರೆ.
ಇನ್ನು, ಪೊಲೀಸರ ತನಿಖೆ ವೇಳೆ ಸಿಲಿಕಾನ್ ಸಿಟಿಯಲ್ಲಿ ಈ ಕೃತ್ಯ ಮಾಡುವಂತಹ ಗ್ಯಾಂಗ್ ನಗರದಲ್ಲಿ ಬೀಡು ಬಿಟ್ಟಿದ್ದು, ಬಹಳ ಮಂದಿಗೆ ಆನ್ಲೈನ್ ವಂಚನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯಕ್ಕೆ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಿ ಶೋಧ ಕಾರ್ಯ ಮುಂದುವರೆಸಿದ್ದಾರೆ.