ಬೆಂಗಳೂರು: ಅಬಕಾರಿ ಖಾತೆಯಲ್ಲಿ ನಾನು ಮಾಡುವುದು ಏನೂ ಇಲ್ಲ, ಹಾಗಾಗಿ ಬೇರೆ ಖಾತೆ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಮನವಿ ಮಾಡಿದ್ದೇವೆ. ಪರಿಶೀಲನೆ ಮಾಡುವುದಾಗಿ ಸಿಎಂ ಹೇಳಿದ್ದಾರೆ ಎಂದು ನೂತನ ಅಬಕಾರಿ ಸಚಿವ ಎಂಟಿಬಿ ನಾಗರಾಜ್ ಸ್ಪಷ್ಟಪಡಿಸಿದ್ದಾರೆ.
ಸಚಿವ ಸುಧಾಕರ್ ನಿವಾಸದಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರದಲ್ಲಿ ವಸತಿ ಖಾತೆ ಸಚಿವನಾಗಿದ್ದೆ. ಅದರಲ್ಲಿ ಕೊಳಗೇರಿ ಮತ್ತು ಹೌಸಿಂಗ್ ಬೋರ್ಡ್ ಎಂಬ ಎರಡು ನಿಗಮಗಳಿವೆ. ಹೌಸಿಂಗ್ ಬೋರ್ಡ್ ಅಡಿ ನಿವಾಸ ಕಟ್ಟಿಕೊಡುವುದು, ಕೊಳಗೇರಿ ಅಭಿವೃದ್ಧಿ ಮಾಡುವುದು. ಹೌಸಿಂಗ್ ಬೋರ್ಡ್ ಅಡಿ ನಿವೇಶನ ಹಂಚಿಕೆ ಮಾಡಿಕೊಡುವ ಕೆಲಸ ಇತ್ತು. ಹಾಗಾಗಿ ಈಗ ಸಿಎಂಗೆ ಅಬಕಾರಿ ಖಾತೆ ಬೇಡ ಎಂದು ಹೇಳಿ ಬಂದಿದ್ದೇನೆ ಎಂದರು.
ಅಬಕಾರಿ ಇಲಾಖೆಯಲ್ಲಿ ನಾನು ಮಾಡುವ ಕೆಲಸ ಏನಿದೆ?: ಅಬಕಾರಿ ಇಲಾಖೆ ಮದ್ಯವನ್ನು ಯಾವುದೋ ಕಂಪನಿಗಳಿಂದ ಖರೀದಿ ಮಾಡಲಿದೆ. ನಂತರ ಅಂಗಡಿಗಳಿಗೆ, ಡೀಲರ್ಗಳಿಗೆ ಹೋಲ್ಸೇಲ್ ದರದಲ್ಲಿ ಕೊಡುತ್ತಾರೆ. ಅವರು ಮಾರಾಟ ಮಾಡುತ್ತಾರೆ. ಹಣವನ್ನು ಸರ್ಕಾರಕ್ಕೆ ಕೊಡುತ್ತಾರೆ. ಅಲ್ಲಿ ನಾನು ಮಾಡುವ ಕೆಲಸ ಏನೂ ಇಲ್ಲ. ಸಾರ್ವಜನಿಕರಿಗೆ, ಬಡವರಿಗೆ ಒಳ್ಳೆಯದಾಗಬೇಕು ಆ ರೀತಿಯ ಖಾತೆ ಕೊಡಿ ಎಂದು ಕೇಳಿದ್ದೆ. ವಸತಿ ಖಾತೆಗಿಂತ ಒಳ್ಳೆಯ ಖಾತೆ ಕೊಡುವುದಾಗಿ ಐದಾರು ಬಾರಿ ಸಿಎಂ ಭರವಸೆ ಕೊಟ್ಟಿದ್ದರು ಎಂದು ಎಂಟಿಬಿ ತಿಳಿಸಿದರು.