ಯಲಹಂಕ: ಏರ್‌ಪೋರ್ಟ್ ಸುತ್ತಮುತ್ತ ಸೈಬರ್ ಪ್ರಕರಣ ಹೆಚ್ಚಾದ ಕಾರಣ ಯಲಹಂಕದಲ್ಲಿ ನೂತನ ಸೈಬರ್ ಪೊಲೀಸ್ ಸ್ಟೇಷನ್ ಉದ್ಘಾಟನೆ ಮಾಡಲಾಗಿದೆ.
![new cyber police station Yelahanka inaugurated S. R. Vishwanath](https://etvbharatimages.akamaized.net/etvbharat/prod-images/kn-bng-02-cyber-av-7208821_06062020154342_0606f_1591438422_416.jpg)
ಯಲಹಂಕನಗರ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸೈಬರ್ ಕ್ರೈಮ್ಸ್ ಹೆಚ್ಚಾಗುತ್ತಿವೆ. ಇವುಗಳ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ಯಲಹಂಕದಲ್ಲಿ ನೂತನ ಸೈಬರ್ ಕ್ರೈಮ್ ಪೊಲೀಸ್ ಠಾಣೆ ಇಂದಿನಿಂದ ಪ್ರತ್ಯೇಕವಾಗಿ ಕಾರ್ಯಾರಂಭ ಮಾಡಲಿದೆ.
ಯಲಹಂಕ ಇನ್ಸ್‌ಪೆಕ್ಟರ್ ಉಸ್ತುವಾರಿಯಲ್ಲಿ ಒಬ್ಬ ಪಿಎಸ್‌ಐ ಮತ್ತು 25 ಸಿಬ್ಬಂದಿ ಈ ಠಾಣೆಯಲ್ಲಿ ಕೆಲಸ ನಿರ್ವಹಿಸಲಿದ್ದಾರೆ. ವೈಟ್ ಕಾಲರ್ ಕ್ರೈಮ್ ಮತ್ತು ಆನ್‌ಲೈನ್ ವಂಚಕರ ವಿರುದ್ಧದ ಕಾನೂನು ಹೋರಾಟಕ್ಕೆ ಈ ಠಾಣೆ ಕೆಲಸ ಮಾಡಲಿದೆ ಎಂದು ಸ್ಥಳೀಯ ಶಾಸಕ ವಿಶ್ವನಾಥ್ ಠಾಣೆ ಉದ್ಘಾಟನೆ ಬಳಿಕ ಹೇಳಿದರು.
ಇದೇ ವೇಳೆ ಈಶಾನ್ಯ ವಿಭಾಗದ ಡಿಸಿಪಿ ಡಾ. ಭೀಮಾಶಂಕರ್ ಗುಳೇದ್ ಅವರು ಆನ್‌ಲೈನ್, ಆರ್ಥಿಕ ಮತ್ತು ಮಾದಕದ್ರವ್ಯ ಸರಬರಾಜು, ಅಪರಾಧಗಳ ನಿಯಂತ್ರಣಕ್ಕಾಗಿ ಈ ಭಾಗದಲ್ಲಿ ಸೈಬರ್ ಕ್ರೈಮ್ ಠಾಣೆ ಬೇಕಿತ್ತು. ಇದೀಗ ನಗರದ ಮೊದಲ ಬಾರಿಗೆ ಕಮಿಷನರ್ ಕಚೇರಿ ಹೊರತಾಗಿ ಯಲಹಂಕ ಸೈಬರ್ ಕ್ರೈಮ್ ಠಾಣೆ ಕರ್ತವ್ಯ ನಿರ್ವಹಿಸಲಿದೆ ಎಂದರು.