ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಜೈಲು ಸೇರಿರುವ ಆರೋಪಿಗಳು ಜಾಮೀನು ಪಡೆದು ಹೊರ ಬಂದ ನಂತರ 14 ದಿನಗಳ ಕಾಲ ಕಡ್ಡಾಯವಾಗಿ ಗೃಹ ಬಂಧನಕ್ಕೆ ಒಳಗಾಗಬೇಕು ಎಂದು ಹೈಕೋರ್ಟ್ ಷರತ್ತು ವಿಧಿಸುತ್ತಿದೆ.
ರಾಜ್ಯದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹೈಕೋರ್ಟ್ ಈ ಹೊಸ ಷರತ್ತನ್ನು ಜಾರಿ ಮಾಡಿದೆ. ಹೈಕೋರ್ಟ್ ಈಗಾಗಲೇ ಜೈಲು ಪ್ರಾಧಿಕಾರಗಳಿಗೆ ಸೂಚನೆ ನೀಡಿ, ವಿಚಾರಣಾಧೀನ ಕೈದಿಗಳು ನ್ಯಾಯಾಲಯಗಳಿಂದ ಜಾಮೀನು ಪಡೆದುಕೊಂಡ ಬಳಿಕ ಅವರಿಗೆ ಕಡ್ಡಾಯವಾಗಿ ಆರೋಗ್ಯ ತಪಾಸಣೆ ನಡೆಸಿ ನಂತರವೇ ಬಿಡುಗಡೆ ಮಾಡಬೇಕು ಎಂದು ಸ್ಪಷ್ಟಪಡಿಸಿದೆ. ಇದರ ಜೊತೆಗೆ ಬಿಡುಗಡೆಯಾಗುವ ಆರೋಪಿಗಳು ಹದಿನಾಲ್ಕು ದಿನಗಳ ಕಾಲ ಹೋಮ್ ಕ್ವಾರಂಟೈನ್ಗೆ ಒಳಗಾಗಬೇಕು ಎಂಬ ಷರತ್ತು ವಿಧಿಸಿದೆ.
ಲಾಕ್ಡೌನ್ ಜಾರಿಯಾದ ಬಳಿಕ ತುರ್ತು ಪರಿಹಾರ ಕೋರಿ ದಾಖಲಾಗುತ್ತಿರುವ ಪ್ರಕರಣಗಳಲ್ಲಿ ಜಾಮೀನು ಅರ್ಜಿಗಳೂ ಸಾಕಷ್ಟಿವೆ. ಇಂತಹ ಅರ್ಜಿಗಳನ್ನು ವಿಚಾರಣೆ ನಡೆಸಿ ಅರ್ಹ ಪ್ರಕರಣಗಳಲ್ಲಿ ಜಾಮೀನು ನೀಡುತ್ತಿರುವ ಹೈಕೋರ್ಟ್, ಆರೋಪಿ ಬಿಡುಗಡೆಯಾದ ಬಳಿಕ ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ಗೆ ಒಳಗಾಗಬೇಕು ಎಂಬ ಹೊಸ ಷರತ್ತು ವಿಧಿಸುತ್ತಿದೆ. ಲಾಕ್ಡೌನ್ ಅವಧಿಯಲ್ಲಿ ಹೈಕೋರ್ಟ್ ಇಪ್ಪತ್ತಕ್ಕೂ ಹೆಚ್ಚು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ್ದು, ಅಷ್ಟೂ ಪ್ರಕರಣಗಳಲ್ಲಿ ಕ್ವಾರಂಟೈನ್ ಷರತ್ತು ವಿಧಿಸಿದೆ. ನಿನ್ನೆ ಪಾದರಾಯನಪುರ ಗಲಭೆ ಪ್ರಕರಣದಲ್ಲಿ ಜೈಲು ಸೇರಿದ್ದ 126 ಮಂದಿಗೆ ಜಾಮೀನು ನೀಡಿದಾಗಲೂ ಇದೇ ಷರತ್ತು ವಿಧಿಸಿದೆ.
ಸಾಮಾನ್ಯವಾಗಿ ನ್ಯಾಯಾಲಯಗಳು ಷರತ್ತು ಬದ್ಧ ಜಾಮೀನು ನೀಡುವ ವೇಳೆ ಭದ್ರತೆಗಾಗಿ ಒಂದಿಷ್ಟು ಮೊತ್ತಕ್ಕೆ ಬಾಂಡ್, ಅರ್ಹ ವ್ಯಕ್ತಿಗಳಿಂದ ಭದ್ರತಾ ಖಾತರಿ, ಸಾಕ್ಷ್ಯನಾಶ ಪಡಿಸಬಾರದು, ತಿರುಚಬಾರದು, ತನಿಖೆಗೆ ಸಹಕರಿಸಬೇಕು, ಕ್ಷೇತ್ರ ಬಿಟ್ಟು ಹೋಗಬಾರದು ಎಂಬ ಮತ್ತಿತರ ಸಾಮಾನ್ಯ ಷರತ್ತುಗಳನ್ನು ವಿಧಿಸುತ್ತವೆ. ಇದೀಗ ಹೋಮ್ ಕ್ವಾರಂಟೈನ್ ಕೂಡ ಈ ಷರತ್ತುಗಳ ಜೊತೆ ಹೊಸದಾಗಿ ಸೇರಿಕೊಂಡಿದೆ. ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಹೈಕೋರ್ಟ್ ಈ ಕ್ರಮ ಅನುಸರಿಸುತ್ತಿದೆ. ಇದರಿಂದಾಗಿ ಆರೋಪಿಗಳು ಜಾಮೀನು ಪಡೆದು ಜೈಲಿನಿಂದ ಹೊರಬಂದರು ಸಹ ಹದಿನಾಲ್ಕು ದಿನಗಳ ಕಾಲ ಗೃಹಬಂಧನ ಅಥವಾ ಹೋಮ್ ಕ್ವಾರಂಟೈನ್ ಗೆ ಕಡ್ಡಾಯವಾಗಿ ಒಳಗಾಗಬೇಕಿದೆ.