ಬೆಂಗಳೂರು: ಹೈಕಮಾಂಡ್ ಜೊತೆಗೆ ಸತತ ಮೂರು ದಿನಗಳ ಸರ್ಕಸ್ ನಂತರ ರಾಜ್ಯ ಸಚಿವ ಸಂಪುಟ ರಚನೆಗೆ ಕಡೆಗೂ ಮುಹೂರ್ತ ಫಿಕ್ಸ್ ಆಗಿದ್ದು, ನಾಳೆ 2:15ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ಸಚಿವ ಸಂಪುಟ ರಚನೆ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಇಂದು ಸಂಜೆ ಅಂತಿಮ ಸುತ್ತಿನ ಮಾತುಕತೆ ಬಳಿಕ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳುವ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.
ಸಿಎಂ ಸೂಚನೆಯಂತೆ ರಾಜಭವನದ ಅಧಿಕಾರಿಗಳನ್ನು ಸಂಪರ್ಕಿಸಿದ, ರವಿಕುಮಾರ್ ಸರ್ಕಾರದ ಪರವಾಗಿ ಸಂಪುಟ ರಚನೆ ಸಂಬಂಧ ಪ್ರಸ್ತಾವನೆ ಸಲ್ಲಿಸಿ ಅಗತ್ಯ ವ್ಯವಸ್ಥೆ ಮಾಡುವಂತೆ ಸಂದೇಶ ಕಳುಹಿಸಿದ್ದಾರೆ. ಸರ್ಕಾರದ ಸಂದೇಶದಂತೆ ನಾಳೆ ಮಧ್ಯಾಹ್ನ 2.15ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಸಲು ರಾಜಭವನದಲ್ಲಿ ಸಿದ್ಧತೆ ಕಾರ್ಯ ಮಾಡಲಾಗುತ್ತಿದೆ.
ನಾಳೆ ಬೆಳಗ್ಗೆ ನವದೆಹಲಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರು ಕಡೆಗೆ ಆಗಮಿಸಲಿದ್ದಾರೆ. ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಅವರೊಂದಿಗೆ ಮಾತುಕತೆ ನಡೆಸುತ್ತಾರೆ. ನಂತರ ಅಲ್ಲಿಂದ ನೇರವಾಗಿ ಯಡಿಯೂರಪ್ಪ ಜೊತೆಯಲ್ಲಿ ರಾಜಭವನಕ್ಕೆ ತೆರಳಲಿರುವ ಮುಖ್ಯಮಂತ್ರಿ ಬೊಮ್ಮಾಯಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ನಾಳೆ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಲಿರುವ ಶಾಸಕರಿಗೆ ಇಂದು ರಾತ್ರಿಯೇ ದೂರವಾಣಿ ಕರೆ ಮೂಲಕ ಮಾಹಿತಿ ನೀಡಲಾಗುತ್ತದೆ. ಖುದ್ದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಥವಾ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಶಾಸಕರಿಗೆ ದೂರವಾಣಿ ಕರೆಮಾಡಿ ಬೆಂಗಳೂರಿಗೆ ಆಗಮಿಸುವಂತೆ ಸೂಚನೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.