ಬೆಂಗಳೂರು: ರಾಜ್ಯದಲ್ಲಿಂದು 141 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 2,922 ಕ್ಕೆ ಏರಿಕೆಯಾಗಿದೆ.
ಇಂದು ಕಂಡು ಬಂದಿರುವ ಪ್ರಕರಣಗಳ ಪೈಕಿ 90 ಜನರು ಅಂತಾರಾಜ್ಯ ಪ್ರಯಾಣಿಕರಾಗಿದ್ದಾರೆ. ಕೊರೊನಾಗೆ ರಾಜ್ಯದಲ್ಲಿ ಮತ್ತೊಂದು ಬಲಿಯಾಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 49 ಕ್ಕೆ ಏರಿಕೆಯಾಗಿದೆ. ಬೀದರ್ ಜಿಲ್ಲೆಯ 42 ವರ್ಷದ ಮಹಿಳೆ ಅನಾರೋಗ್ಯದಿಂದ ಬಳಲುತ್ತಿದ್ದರು. ಇವರು ಮೇ 24 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಮೇ 28 ರಂದು ಮೃತಪಟ್ಟಿದ್ದರು. ಇಂದು ಅವರ ಕೋವಿಡ್ -19 ವರದಿ ಪಾಸಿಟಿವ್ ಬಂದಿದೆ.
ಕರ್ನಾಟಕದಲ್ಲಿ ಈವರೆಗೆ ದೃಢಪಟ್ಟ ಕೊರೊನಾ ಪ್ರಕರಣಗಳ ಪೈಕಿ 997 ಜನರು ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1,874 ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ 15 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 208 ಜನರನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆಗೊಳಪಡಿಸಲಾಗಿದೆ. ಸರ್ಕಾರಿ ಕ್ವಾರಂಟೈನ್ ಕೇಂದ್ರಗಳಲ್ಲಿ 4,290 ಜನ ಇದ್ದು, 1,12,165 ಜನ ಇದುವರೆಗೆ ಕ್ವಾರಂಟೈನ್ನಲ್ಲಿ ಇದ್ದರು. ಇತ್ತ ಬೆಂಗಳೂರಿನಲ್ಲಿ ಪತ್ತೆಯಾಗಿರುವ ಕೇಸ್ಗಳ ಪೈಕಿ 21 ಪ್ರಕರಣಗಳ ಮೂಲ ಪತ್ತೆಯಾಗಿಲ್ಲ. ಸಂಪರ್ಕ ಪತ್ತೆ ಹಚ್ಚುತ್ತಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಸಂಪರ್ಕ ಇಲ್ಲದವರು ಎಲ್ಲರೂ ಕೂಡಾ ಒಂದೇ ಕುಟುಂಬಕ್ಕೆ ಸೇರಿದವರು ಎನ್ನಲಾಗುತ್ತಿದೆ.
ಇತ್ತ ಕೊರೊನಾ ವೈರಸ್ ಹರಡುವಿಕೆ ಹೆಚ್ಚಾಗುತ್ತಿರುವ ದೃಷ್ಟಿಯಿಂದಾಗಿ ಇಲಾಖೆಗೆ ಸಿಬ್ಬಂದಿ ಕೊರತೆ ಎದುರಾಗುವ ನಿಟ್ಟಿನಲ್ಲಿ ವಯೋ ನಿವೃತ್ತಿ ಹೊಂದುತ್ತಿರುವ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳ ವೈದ್ಯಕೀಯ, ಅರೆ ವೈದ್ಯಕೀಯ, ಪೂರಕವಾಗಿರುವ ಕ್ಲಿನಿಕಲ್ ಮತ್ತು ನಾನ್ ಕ್ಲಿನಿಕಲ್ ಸಿಬ್ಬಂದಿ ಸೇವೆಯನ್ನ ಮುಂದಿನ ತಿಂಗಳವರೆಗೆ ಮುಂದುವರೆಸುವಂತೆ ಆದೇಶಿಸಲಾಗಿದೆ. ಅಂದರೆ ಜೂನ್ 30 ರ ವರೆಗೆ ವಿಸ್ತರಿಸುವ ಅಧಿಸೂಚನೆ ಹೊರಡಿಸಿದೆ.