ಬೆಂಗಳೂರು: ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧನಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಮೃತಪಟ್ಟಿರುವ ಘಟನೆ ನಡೆದಿದೆ.
ಮಾವಳ್ಳಿ ನಿವಾಸಿ ಲಕ್ಷ್ಮಿನಾರಾಯಣ್ (72) ಮೃತ ವೃದ್ಧ. ಉಸಿರಾಟದ ಸಮಸ್ಯೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲೆಂದು ಕುಟುಂಬಸ್ಥರು ಪರದಾಡಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿ ಮಾತ್ರ ಕೊರೊನಾ ರೋಗಿಗಳು ಇದ್ದಾರೆ. ಬೆಡ್ ಸಮಸ್ಯೆ ಇದೆ ಎಂದು ಹೇಳಿದ್ದಾರೆ. ಆದರೆ ಸೂಕ್ತ ಸಮಯಕ್ಕೆ ಚಿಕಿತ್ಸೆಗೆ ಸಿಗದೆ ವೃದ್ಧ ಸಾವನ್ನಪ್ಪಿದ್ದಾರೆ.
ಬೆಂಗಳೂರು ಮೆಡಿಕಲ್ ಹಾಸ್ಪಿಟಲ್, ಗಿರಿನಗರದ ಪಲ್ಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಕೋಣನಕುಂಟೆಯ ಆಸ್ಟ್ರಾ ಆಸ್ಪತ್ರೆಗೆ ಅಲೆದಾಡಿದರೂ ಯಾವುದೇ ಆಸ್ಪತ್ರೆಯಲ್ಲಿ ವೃದ್ಧನಿಗೆ ಚಿಕಿತ್ಸೆ ಸಿಕ್ಕಿಲ್ಲ ಎನ್ನಲಾಗಿದೆ. ಅಂತಿಮವಾಗಿ ತಲಘಟ್ಟಪುರದ ಶಂಕರ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳಲಾಗಿದೆ. ಆದರೆ ಅಲ್ಲಿಯೂ ಅರ್ಧ ಗಂಟೆಗಳ ಕಾಲ ಕಾದು ದಿನಕ್ಕೆ 40 ಸಾವಿರ ರೂ. ಫಿಕ್ಸ್ ಮಾಡಿ, 20 ಸಾವಿರ ಮುಂಗಡವಾಗಿ ಪಡೆದು ರಾತ್ರಿ 11ಕ್ಕೆ ಆಸ್ಪತ್ರೆಗೆ ದಾಖಲು ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 12 ಗಂಟೆಗೆ ವೃದ್ಧ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.