ಬೆಂಗಳೂರು: ಬಿಬಿಎಂಪಿ ನಿರ್ಲಕ್ಷ್ಯದಿಂದ ಸೆಪ್ಟೆಂಬರ್ 1ಕ್ಕೆ ಹಸಿ ಕಸದ ನೂತನ ಟೆಂಡರ್ ಜಾರಿಯಾಗೋದು ಅಸಾಧ್ಯ ಎಂಬ ಮಾತುಗಳು ಕೇಳಿ ಬರುತ್ತಿವೆ.
ಎಂಪಿ ಚುನಾವಣೆ ಪೂರ್ವದಿಂದಲೇ ನೂತನ ಟೆಂಡರ್ ಸಿದ್ಧಪಡಿಸಿ, ಒಟ್ಟು 160 ಟೆಂಡರ್ ಕಡತಗಳನ್ನು ಅಂತಿಮಗೊಳಿಸಿ ಅಧಿಕಾರಿಗಳು ತಮ್ಮ ಕಾರ್ಯ ಸಂಪೂರ್ಣಗೊಳಿಸಿದ್ದರೂ ಇದಕ್ಕೆ ಅನುಮತಿ ನೀಡಬೇಕಾದ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ನಿರ್ಲಕ್ಷ್ಯವಹಿಸಿದೆ. ಈ ಸಮಿತಿಯ ಅಧ್ಯಕ್ಷ ಕಾರ್ಪೋರೇಟರ್ ಮುಜಾಹಿದ್ ಪಾಷಾ ಧಾರ್ಮಿಕ ಕೇಂದ್ರಕ್ಕೆ ಪ್ರವಾಸ ಹೋಗಿದ್ದಾರೆ. ಇವರು ಇದ್ದಾಗಲೂ ಕೆಲವು ಲಾಬಿಗಳಿಗಾಗಿಯೇ ಟೆಂಡರ್ ಕಡತಗಳ‌್ನು ಪಾಸ್ ಮಾಡದೇ ಅನಾವಶ್ಯಕ ವಿಳಂಬ ಮಾಡಲಾಗಿದ್ದು, ಕಾರ್ಪೋರೇಟರ್ಗಳಿರುವ ಕೌನ್ಸಿಲ್ನಲ್ಲೂ ಈವರೆಗೆ ಅನುಮತಿ ಸಿಕ್ಕಿಲ್ಲ.ಈ ಎಲ್ಲ ಕಾರಣಗಳಿಂದ ಸೆಪ್ಟೆಂಬರ್ ಒಂದಕ್ಕೆ ಹೊಸ ಟೆಂಡರ್ ಜಾರಿಯಾಗೋದು ಅಸಾಧ್ಯ ಎಂಬ ಮಾತು ಕೇಳಿ ಬರ್ತಿದೆ.
ಈ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿದ ಪಾಲಿಕೆಯ ವಿಶೇಷ ಆಯುಕ್ತರಾದ ರಂದೀಪ್, ಸಮಿತಿಗೆ ಕಳಿಸಿರುವ 160 ಟೆಂಡರ್ ಕಡತಗಳಲ್ಲಿ 35 ಕಡತಗಳಿಗೆ ಮಾತ್ರ ಒಪ್ಪಿಗೆ ಸೂಚಿಲಾಗಿದೆ. ಆಯುಕ್ತರಾದ ಮಂಜುನಾಥ್ ಪ್ರಸಾದ್ ಟೆಂಡರ್ ಕಡತಗಳನ್ನು ಆದಷ್ಟು ಬೇಗ ಪಾಸ್ ಮಾಡಿ ಕೊಡುವಂತೆ ಪತ್ರ ಬರೆದಿದ್ದಾರೆ. ಇದು ತುರ್ತು ಅವಶ್ಯಕತೆ ಆಗಿರುವುದರಿಂದ ಸರ್ಕಾರಕ್ಕೂ ಈ ಬಗ್ಗೆ ಪತ್ರ ಬರೆಯಲಿದ್ದು,ಇಂದು ನಡೆಯುವ ಕೌನ್ಸಿಲ್ ಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗಲಿದೆ ಎಂದರು.