ಬೆಂಗಳೂರು: ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರು ಲಾಕ್ಡೌನ್ನಿಂದ ಉಂಟಾದ ಆರ್ಥಿಕ ನಷ್ಟದ ಉಪಕ್ರಮವಾಗಿ ಘೋಷಿಸಿದ 20 ಲಕ್ಷ ಕೋಟಿ ರೂ. ಪ್ಯಾಕೇಜ್ನಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಕಡೆಗಣಿಸಿದ್ದಾರೆ ಎಂದು ಉದ್ಯಮ ಸಂಬಂಧಿತ ವಹಿವಾಟುದಾರರು ಅಸಮಾಧಾನ ಹೊರಹಾಕಿದ್ದಾರೆ.
ಈಟಿವಿ ಭಾರತ ಮಾತನಾಡಿದ ಓಲಾ- ಉಬರ್ ಚಾಲಕರ ಸಂಘದ ಅಧ್ಯಕ್ಷ ತನ್ವಿರ್ ಪಾಷಾ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅವಲಂಬಿತರಾಗಿರುವವರು ಸಾಕಷ್ಟು ಜನರಿದ್ದಾರೆ. ಹೋಟೆಲ್, ಲಾಡ್ಜ್ಗಳಲ್ಲಿ ಲಕ್ಷಾಂತರ ಜನರು ಕೆಲಸ ಮಾಡುತ್ತಿದ್ದಾರೆ. ಕ್ಯಾಬ್ ಚಾಲಕರು ರಾಜ್ಯದ ಬೇರೆ ಜಿಲ್ಲೆಗಳಿಂದ ಬಂದು ಬೆಂಗಳೂರಿನಲ್ಲಿ ಸಾಲ ಪಡೆದು ಕಾರು ಓಡಿಸುತ್ತಿದ್ದಾರೆ. ವಿಶೇಷ ಪ್ಯಾಕೇಜ್ನಲ್ಲಿ ಯಾವುದೇ ಘೋಷಣೆ ನೀಡಿಲ್ಲ. ಹೀಗಾಗಿ, ಮುಂದಿನ ಭವಿಷ್ಯ ಹೇಗೆ ಎಂಬ ಚಿಂತ ಚಾಲಕರಲ್ಲಿ ಮೂಡಿದೆ ಎಂದರು.
ಪ್ರವಾಸೋದ್ಯಮ ಕ್ಷೇತ್ರ ದೇಶದ ಜಿಡಿಪಿಗೆ ಸುಮಾರು ಶೇ 9ರಷ್ಟು ಕೊಡುಗೆ ನೀಡುತ್ತಿದೆ. ಕ್ಯಾಬ್ ಸೇವೆ , ಹೋಟೆಲ್ ಉದ್ಯಮ, ಖಾಸಗಿ ಬಸ್ ಸೇವೆ, ವಿಮಾನಯಾನ ಪ್ರವಾಸೋದ್ಯಮಕ್ಕೆ ಪೂರಕವಾಗಿ ನೆರವಾಗುತ್ತಿವೆ. ಕೊರೊನ ವೈರಸ್ ಭೀತಿಯಿಂದ ಪ್ರವಾಸೋದ್ಯಮ ಕ್ಷೇತ್ರ ಕುಸಿದಿದೆ. ಒಂದುವರೆ ತಿಂಗಳಿಂದ ವಿಮಾನಯಾನ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರಿಲ್ಲದೆ ಕ್ಯಾಬ್ ಸೇವೆ, ಹೋಟೆಲ್, ಪ್ರವಾಸ ತಾಣಗಳ ಆದಾಯ ನೆಲ ಕಚ್ಚಿದೆ ಎಂದು ಹೇಳಿದರು.
ಸರ್ಕಾರ ಪ್ರವಾಸೋದ್ಯಮ ವಲಯಕ್ಕೆ ಪ್ರತ್ಯೇಕ ಅನುದಾನ ಘೋಷಣೆ ಮಾಡಬಹುದಿತ್ತು. ವೈಜ್ಞಾನಿಕವಾಗಿ ಮುಂದಿನ ದಿನಗಳಲ್ಲಿ ಪ್ರವಾಸಿ ತಾಣಗಳು ತೆರೆಯಲು ಸರ್ಕಾರ ಆದೇಶ ನೀಡಬಹುದಿತ್ತು ಎಂದರು.
ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿರುವ ಸಣ್ಣ ಟ್ರಾವೆಲ್ ಬುಕ್ಕಿಂಗ್ ಮಾಲೀಕರ ಸ್ಥಿತಿ ಚಿಂತಾಜನಕವಾಗಿದೆ. ಬೇರೆ ವ್ಯಾಪಾರ ಆರಂಭಿಸಲು ಆಗದ ಸ್ಥಿತಿಯಲ್ಲಿ ಮಾಲೀಕರು ಇದ್ದಾರೆ. ಜೀವನೋಪಾಯಕ್ಕೆ ಏನು ಎಂಬ ಆತಂಕ ಶುರುವಾಗಿದೆ ಎಂದು ಅಲವತ್ತುಕೊಂಡರು.