ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಫಾಸ್ಟೆಸ್ಟ್ ಟ್ರಾನ್ಸ್ಪೋರ್ಟ್ ಸಿಸ್ಟಂ ಅಂದರೆ ಅದು ನಮ್ಮ ಮೆಟ್ರೋ ರೈಲು. ದಿನ ಕಳೆದಂತೆ ಮೆಟ್ರೋ ಸಂಚಾರವನ್ನು ಇಷ್ಟಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ದಿನದಿಂದ ದಿನಕ್ಕೆ ಹೆಚ್ಚಿನ ಪ್ರಯಾಣಿಕರನ್ನು ಹೊಂದುತ್ತಿರುವ ನಮ್ಮ ಮೆಟ್ರೋ ರೈಲಿಗೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು ಈ ಹಿಂದೆ ವರದಿಯಾಗಿತ್ತು. ಈ ಘಟನೆಯಿಂದ ಎಚ್ಚೆತ್ತ ಮೆಟ್ರೋ ನಿಗಮ ಕಲ್ಲು ತೂರುವ ಕಿಡಿಗೇಡಿಗಳ ವಿರುದ್ಧ ದೂರು ದಾಖಲಿಸಿ, ಕಾನೂನು ಕ್ರಮಕ್ಕೆ ಮುಂದಾಗಿದೆ.
ಮಾಗಡಿ ರಸ್ತೆ ನಿಲ್ದಾಣದಿಂದ ಎಂ.ಜಿ ರಸ್ತೆವರೆಗೆ ಸುರಂಗ ಮಾರ್ಗವಿದೆ. ಮಾಗಡಿ ರಸ್ತೆಯಲ್ಲಿ ಡೌನ್ ರ್ಯಾಂಪ್ ಮೂಲಕ ಮೆಟ್ರೋ ರೈಲು ಸುರಂಗ ಮಾರ್ಗ ಪ್ರವೇಶಿಸುತ್ತದೆ. ಪ್ರವೇಶ ಸಂದರ್ಭ ರೈಲು ರಸ್ತೆಯ ಮೇಲ್ಮಟ್ಟಕ್ಕೆ ಬರುವ ಹಿನ್ನೆಲೆ (ಸಂಚಾರ ಮಾಡುವಾಗ) ರಸ್ತೆಯ ಅಕ್ಕಪಕ್ಕದಲ್ಲಿ ನಿಂತು ಕೆಲ ಕಿಡಿಗೇಡಿಗಳು ರೈಲಿಗೆ ಕಲ್ಲು ತೂರಾಟ ಮಾಡುತ್ತಿದ್ದರು.
ಕೆಲ ವರ್ಷಗಳ ಹಿಂದೆ ಬೆಂಗಳೂರಲ್ಲಿ ಮೆಟ್ರೋ ಸುರಂಗ ಮಾರ್ಗ ಮೊದಲ ಬಾರಿಗೆ ಆರಂಭವಾದ ಸಮಯದಲ್ಲೂ ಈ ರೀತಿಯ ಘಟನೆ ಆಗಿತ್ತು. ಆದಾದ ಬಳಿಕ ಮತ್ತೆ ಸಮಾಜಘಾತುಕ ಹಾಗೂ ಸಾರ್ವಜನಿಕರ ಆಸ್ತಿಗಳನ್ನು ಹಾನಿ ಮಾಡುವಂತಹ ಕೆಲಸ ನಡೆಯುತ್ತಿದ್ದ ಹಿನ್ನೆಲೆ ಸದ್ಯ ಬಿಎಂಆರ್ಸಿಎಲ್ ಎಚ್ಚೆತ್ತಿದೆ. ಕಲ್ಲು ತೂರಾಟವಾಗುತ್ತಿದ್ದ ಸ್ಥಳಗಳಲ್ಲಿ 10 ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಕೃತ್ಯ ನಡೆಸುವವರ ಮೇಲೆ ನಿಗಾ ಇಟ್ಟಿದೆ.
ಕಲ್ಲು ತೂರಾಟವಾಗುತ್ತಿದ್ದ ಪ್ರದೇಶಗಳಲ್ಲಿ ಮೆಟ್ರೋ ನಿಗಮ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದು, ದಿನದ 24 ಗಂಟೆಯೂ ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತಿವೆ. ಯಾರಾದರೂ ಕಲ್ಲು ತೂರಾಟ ಮಾಡಿದ್ರೆ ಸಿಸಿ ಕ್ಯಾಮೆರಾ ಮೂಲಕ ಮಾಹಿತಿ ಕಲೆ ಹಾಕಿ ಪೊಲೀಸ್ ಠಾಣೆಗೆ ದೂರು ನೀಡಲು ಮೆಟ್ರೋ ನಿಗಮ ನಿರ್ಧರಿಸಿದೆ.
ಮೆಟ್ರೋ ಸುರಕ್ಷತೆ ಸಂಬಂಧ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದ್ದು, ಸುರಂಗ ಮಾರ್ಗ ಹಾಗೂ ಎಲಿವೇಡೆಟ್ ಕನೆಕ್ಟಿಂಗ್ ಜಂಕ್ಷನ್ಗಳಲ್ಲಿ ಸೆಕ್ಯೂರಿಟಿ ಅಲರ್ಟ್ ಮಾಡಲಾಗಿದೆ. ಕ್ಯಾಮೆರಾ ಅಳವಡಿಸಿದ ನಂತರದಿಂದ ಈ ರೀತಿಯ ಪ್ರಕರಣ ಕಂಡು ಬಂದಿಲ್ಲ. ಒಂದು ವೇಳೆ ಕಲ್ಲು ತೂರಿದ್ರೆ ಅಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಬಿಎಂಆರ್ಸಿಎಲ್ ನಿರ್ಧರಿಸಿದೆ.
ಇದನ್ನೂ ಓದಿ: ಮಂಗಳೂರು: ತಾತನ ಪಿಂಡ ಪ್ರದಾನ ಮಾಡಲು ಬಂದ ಯುವತಿಯರು ಸಮುದ್ರ ಪಾಲು
ಕಲ್ಲು ತೂರಾಟ ಘಟನೆ ಬಳಿಕ ಮೆಟ್ರೋ ನಿಗಮ ಗೋಡೆಗಳನ್ನು ಎತ್ತರಿಸುವ ಬಗ್ಗೆ ಚರ್ಚೆ ನಡೆಸಿತ್ತು. ಆದ್ರೆ, ಗೋಡೆ ಎತ್ತರಿಸಿದ್ರೆ ಮೆಟ್ರೋ ನಿಗಮಕ್ಕೆ ಹೆಚ್ಚಿನ ಹೊರೆ ಬೀಳಲಿದೆ. ಹೀಗಾಗಿ, ಈ ಪ್ರಸ್ತಾವನೆ ಕೈಬಿಟ್ಟು ಕ್ಯಾಮೆರಾ ಕಣ್ಗಾವಲು ಇಡಲಾಗಿದೆ. ಇನ್ನು ಸಿಸಿಟಿವಿ ಅಳವಡಿಕೆ ಆದ್ಮೇಲೆ ಕಲ್ಲು ತೂರಾಟ ಆಗುವುದು ನಿಂತಿದೆ ಅಂತಾ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಫರ್ವೇಜ್ ತಿಳಿಸಿದ್ದಾರೆ. ಕಲ್ಲು ತೂರಾಟದಿಂದ ಮೆಟ್ರೋ ಬೋಗಿಗೆ ಯಾವುದೇ ಹಾನಿಯಾಗಿಲ್ಲ. ಆದರೆ, ಸಾರ್ವಜನಿಕರ ಹಿತದೃಷ್ಟಿಯಿಂದ ಸಿಸಿಟಿವಿ ಅಳವಡಿಕೆ ಮಾಡಿದ್ದು, ಇದರಿಂದ ಯಾವುದೇ ಹೆಚ್ಚಿನ ಹೊರೆಯಾಗಿಲ್ಲ ಎಂದು ತಿಳಿಸಿದರು.