ಬೆಂಗಳೂರು : ಬ್ರಿಟಿಷರ ಕಾಲದಲ್ಲಿ ನಗರದ ಹಲವು ರಸ್ತೆಗಳು, ಆಸ್ಪತ್ರೆಗಳಿಗೆ ಅಂದಿನ ಬ್ರಿಟಿಷ್ ಖ್ಯಾತನಾಮರ ಹೆಸರುಗಳನ್ನು ಇಡಲಾಗಿದೆ. ಅಂತಹ ಸಂಸ್ಥೆಗಳು, ರಸ್ತೆಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಹೆಸರಿಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಸಂಗೊಳ್ಳಿ ರಾಯಣ್ಣ ಅವರ ಸ್ಮರಣೋತ್ಸವದ ಅಂಗವಾಗಿ ನಗರದಲ್ಲಿರುವ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಬಳಿಕ ಸಿಎಂ ಈ ಭರವಸೆ ನೀಡಿದರು. ಇದೇ ವೇಳೆ ನಗರದ ಶಾಲಾ ಕಾಲೇಜುಗಳಲ್ಲಿ ರಾಯಣ್ಣನ ಭಾವಚಿತ್ರ ಹಾಕುವಂತೆ ಇಂದೇ ಆದೇಶಿಸಲಾಗುವುದು.
ಅದೇ ರೀತಿ ರಾಣಿ ಚೆನ್ನಮ್ಮ ಅವರ ಪ್ರತಿಮೆಗಳು ಇರುವ ಜಾಗಗಳಲ್ಲಿ ಚೆನ್ನಮ್ಮನ ಬಲಗೈ ಆಗಿದ್ದ ಅಪ್ರತಿಮ ಹೋರಾಟಗಾರ ರಾಯಣ್ಣ ಅವರ ಪ್ರತಿಮೆಯನ್ನೂ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ದೆಹಲಿಯಲ್ಲಿಯೂ ರಾಣಿ ಚೆನ್ನಮ್ಮ ಪ್ರತಿಮೆ ಇದ್ದು, ರಾಯಣ್ಣ ಅವರ ಪ್ರತಿಮೆ ನಿರ್ಮಿಸಲು ಸಂಬಂಧಪಟ್ಟವರಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
ಸಂಗೊಳ್ಳಿ ರಾಯಣ್ಣ ಹುತಾತ್ಮರಾದ ದಿನದ ನೆನಪಿಗಾಗಿ ನಗರದ ಖೋಡೆ ಸರ್ಕಲ್ನಲ್ಲಿ ಆಯೋಜಿಸಿದ್ದ ರಾಯಣ್ಣರ 191ನೇ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದರು. ಮಾಲಾರ್ಪಣೆ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕರಿ ಕಂಬಳಿ ಹೊದಿಸಿ ಗೌರವಿಸಲಾಯಿತು.
ರಾಯಣ್ಣ ಹೆಸರಲ್ಲಿ ಮಿಲಿಟರಿ ಸ್ಕೂಲ್: ಕಾರ್ಯಕ್ರಮದಲ್ಲಿ ರಾಯಣ್ಣ ಅವರ ಸೇನಾ ಚಾತುರ್ಯ ಬಣ್ಣಿಸಿದ ಸಿಎಂ ಬೊಮ್ಮಾಯಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣರ ಹೆಸರಿನಲ್ಲಿ 100 ಎಕರೆ ಪ್ರದೇಶದಲ್ಲಿ ಮಿಲಿಟರಿ ಸ್ಕೂಲ್ ನಿರ್ಮಿಸುತ್ತೇವೆ ಎಂದರು.
ಯೋಜನೆ ಜಾರಿಗೆ ಒಟ್ಟು 185 ಕೋಟಿ ರೂ. ಖರ್ಚಾಗಲಿದ್ದು, ಅದಕ್ಕಾಗಿ ಸರ್ಕಾರ 55 ಕೋಟಿ ರೂ. ಬಿಡುಗಡೆ ಮಾಡಿದೆ ಎಂದರು. ಇನ್ನು, ನಂದಗಡದಲ್ಲಿ ರಾಯಣ್ಣ ಅವರ ಸ್ಮಾರಕ ನಿರ್ಮಾಣ ಮಾಡಲಾಗುವುದು. ಸಂಗೊಳ್ಳಿಯಲ್ಲೂ ರಾಯಣ್ಣನ ಸ್ಮರಣೆಗೆ 10 ಎಕರೆ ಪ್ರದೇಶದಲ್ಲಿ ರಾಕ್ ಗಾರ್ಡನ್ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಸಚಿವ ಆರ್. ಅಶೋಕ್, ಸಂಸದ ಪಿಸಿ ಮೋಹನ್ ಹಾಗೂ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ