ಬೆಂಗಳೂರು: ಶಾಸಕರ ಮನೆ ಸೇರಿದಂತೆ ಗಲಭೆಪೀಡಿತ ಪ್ರದೇಶಗಳಿಗೆ ಬಿಜೆಪಿ ರಾಜ್ಯಾಧ್ಯಕ ನಳೀನ್ ಕುಮಾರ್ ನೇತೃತ್ವದ ನಿಯೋಗ ಭೇಟಿ ನೀಡಿ ಪರಿಶೀಲಿಸಿತು.
ಗಲಭೆಕೋರರಿಂದ ಶಾಸಕರ ಮನೆ ಹಾಗೂ ಡಿ.ಜಿ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಠಾಣೆಗಳಿಗಾಗಿರುವ ಹಾನಿ ಕಂಡು ಮರುಕ ವ್ಯಕ್ತಪಡಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಘಟನೆ ನೋಡಿದಾಗ ಇದು ನಿಜಕ್ಕೂ ಭಯಾನಕವಾಗಿದೆ. ದೇಶದಲ್ಲಿ ಹಲವು ಆಂದೋಲನಗಳು ನಡೆಯುತ್ತವೆ. ಆದರೆ ಪೊಲೀಸ್ ಠಾಣೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ ಅಂದರೆ ನಿಜಕ್ಕೂ ಇದು ರಾಷ್ಟ್ರ ವಿರೋಧಿ ಘಟನೆಯಾಗಿದೆ ಎಂದರು.
ಘಟನೆ ಹಿಂದೆ ಯಾರೇ ಇದ್ದರೂ ಸರ್ಕಾರ ಬಂಧಿಸಲಿದೆ. ಗಲಭೆಯಲ್ಲಿ ಭಾಗಿಯಾಗಿರುವ ಎಲ್ಲರ ಸರ್ಕಾರಿ ಸವಲತ್ತುಗಳನ್ನ ತೆಗೆಯಬೇಕೆಂದು ಒತ್ತಾಯಿಸಲಾಗುವುದು. ಸರ್ಕಾರದ ಅನುಮತಿ ಇಲ್ಲದೇ ನೀರು ಕರೆಂಟ್ ಪಡೆಯುವವರ ಮೇಲೆ ನಿಗಾ ಇಡಬೇಕು ಎಂದು ಒತ್ತಾಯಿಸಿದರು.
ಅಹಿಂದ್ ಚಳವಳಿ ಮೂಲಕ ಮುಖ್ಯಮಂತ್ರಿಯಾಗಿದ್ದ ಸಿದ್ದರಾಯಮಯ್ಯ ಇನ್ನೂ ಯಾಕೆ ಈ ಸ್ಥಳಕ್ಕೆ ಬಂದಿಲ್ಲ. ಕಾಂಗ್ರೆಸ್ ಹಿರಿಯ ನಾಯಕರಾದ ಖರ್ಗೆ, ಪರಮೇಶ್ವರ್ ಅವರನ್ನು ಹಿಂದೆ ಇಡುವ ಕೆಲಸ ಮಾಡಿದ್ರು. ಈಗ ಶ್ರೀನಿವಾಸ್ ಅವರನ್ನು ಹಿಂದಿಡುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅಹಿಂದ್ ಅನ್ನು ಹಿಂದಕ್ಕಿಟ್ಟಂತೆ ಕಾಣುತ್ತಿದೆ ಎಂದು ಟೀಕಿಸಿದರು.
ಕೋಮುಗಲಭೆ ಸೃಷ್ಟಿಸಿದ 2 ಸಾವಿರಕ್ಕೂ ಹೆಚ್ಚು ಆರೋಪಿಗಳ ಮೇಲಿನ ಕೇಸ್ಗೆ ಬಿ ರಿಪೋರ್ಟ್ ಕೊಡಿಸಿದ್ದರು. ಇದರಿಂದ ಕೋಮುಗಲಭೆ ಮಾಡೋರಿಗೆ ವಿಶ್ವಾಸ ತುಂಬಿದಂತಾಗಿದೆ. ಘಟನೆಗೆ ಶಾಸಕ ಜಮೀರ್ ಅಹಮ್ಮದ್ ಕುಮ್ಮಕ್ಕಿದೆ ಎಂದು ನಳೀನ್ ಕುಮಾರ್ ದೂರಿದರು.
ಶಾಸಕ ಶ್ರೀನಿವಾಸ್ ಮೂರ್ತಿ ಈ ಭಾಗದ ಶಾಸಕರು. ಇವರ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಬೇಕು ಎಂಬುದು ಗಲಭೆಕೋರರ ಉದ್ದೇಶವಾಗಿತ್ತು. ವರದಿಯನ್ನು ಭಾನುವಾರ ಅರವಿಂದ ಲಿಂಬಾವಳಿಯವರು ಕೊಟ್ಟಿದ್ದಾರೆ. ನಾನು ಇಂದು ರಾಜ್ಯಾಧ್ಯಕ್ಷನಾಗಿ ಸಾಂತ್ವನ ಹೇಳಲು ಬಂದಿದ್ದೇನೆ.
ಎಸ್ಡಿಪಿಐ ದಾಂಧಲೆ ನಡೆಸಿ ಕೋಮು ಗಲಭೆ ನಡೆಸಲು ಸಂಚು ರೂಪಿಸಿತ್ತು. ಇಲ್ಲಿ ನಡೆದ ದಾಂದಲೆ ನೋಡಿದಾಗ ಭಯೋತ್ಪಾದಕರ ಹಿನ್ನೆಲೆ ಇರುವಂತೆ ಕಾಣುತ್ತದೆ. ಹೀಗಾಗಿ ಈ ನಿಟ್ಟಿನಲ್ಲಿ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.