ಬೆಂಗಳೂರು: ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯಕ್ಕೆ ಉಪ ಕುಲಪತಿಯಾಗಿ ನಾಗೇಶ್ ವಿ. ಬೆಟ್ಟಕೋಟೆ ಅವರನ್ನು ನೇಮಕ ಮಾಡಿರುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟೇಬಲ್ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲಕಾಲ ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ಉಪಕುಲಪತಿಗಳ ಆಯ್ಕೆ ಶೋಧನಾ ಸಮಿತಿ, ಉಪ ಕುಲಪತಿಯಾಗಿರುವ ನಾಗೇಶ್ ವಿ. ಬೆಟ್ಟಕೋಟೆ ಹಾಗೂ ವಿವಿ ರಿಜಿಸ್ಟ್ರಾರ್ಗೆ ನೋಟಿಸ್ ಜಾರಿ ಮಾಡಿತು. ಅಲ್ಲದೇ, ಉಪಕುಲಪತಿ ಆಯ್ಕೆ ಶೋಧನಾ ಸಮಿತಿಯು ಪರಿಶೀಲಿಸಿದ್ದ ಅಭ್ಯರ್ಥಿಗಳ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ವಿವಿ ರಿಜಿಸ್ಟ್ರಾರ್ಗೆ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ವೆಂಕಟೇಶ್ ದಳವಾಯಿ ವಾದಿಸಿ, ಗಂಗೂಬಾಯಿ ಹಾನಗಲ್ ಸಂಗೀತ ವಿವಿಗೆ ಶೋಧನಾ ಸಮಿತಿ ಶಿಫಾರಸು ಮಾಡಿದ್ದ ಅಭ್ಯರ್ಥಿಯನ್ನು ಕುಲಪತಿಯಾಗಿ ನೇಮಕ ಮಾಡಬೇಕಿತ್ತು. ಆದರೆ ಶೋಧನಾ ಸಮಿತಿ ಆಯ್ಕೆ ಮಾಡಿರದ ನಾಗೇಶ್ ಬೆಟ್ಟಕೋಟೆ ಅವರನ್ನು ಉಪಕುಲಪತಿಗಳಾಗಿ ನೇಮಕ ಮಾಡಿ ಕುಲಪತಿ ಆದೇಶಿಸಿದ್ದಾರೆ ಎಂದು ವಿವರಿಸಿದರು.
ಅರ್ಜಿದಾರರ ಕೋರಿಕೆ: ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯಕ್ಕೆ ಉಪ ಕುಲಪತಿಗಳನ್ನು ನೇಮಿಸಲು ಶೋಧನಾ ಸಮಿತಿ ಅರ್ಜಿ ಆಹ್ವಾನಿಸಿತ್ತು. ಅದರಂತೆ ಶೋಧನಾ ಸಮಿತಿ ಶಿಫಾರಸು ಮಾಡಿದ್ದವರನ್ನು ಬಿಟ್ಟು ಕುಲಪತಿಗಳು ನಾಗೇಶ್ ಬೆಟ್ಟಕೋಟೆ ಅವರನ್ನು ವಿವಿಗೆ ಉಪಕುಲಪತಿಯಾಗಿ ನೇಮಿಸಿ 2021ರ ಜನವರಿ 22ರಂದು ಆದೇಶಿಸಿದ್ದಾರೆ. ಇದು ವಿವಿಯ ನಿಯಮಗಳಿಗೆ ವಿರುದ್ಧವಾಗಿದ್ದು, ನಾಗೇಶ್ ನೇಮಕ ಆದೇಶವನ್ನು ರದ್ದುಗೊಳಿಸಬೇಕು. ಹಾಗೆಯೇ ಶೋಧನಾ ಸಮಿತಿ ಶಿಫಾರಸು ಮಾಡಿರುವ ಅಭ್ಯರ್ಥಿಗಳಲ್ಲಿ ಸೂಕ್ತ ವ್ಯಕ್ತಿಯನ್ನು ವಿವಿಗೆ ಉಪಕುಲಪತಿಯಾಗಿ ನೇಮಿಸಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.