ಬೆಂಗಳೂರು: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 2022 ರ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಸ್ವೀಪ್ ಕಾರ್ಯಕ್ರಮದ ಅಡಿಯಲ್ಲಿ ‘ನನ್ನ ಮತ ನನ್ನ ಭವಿಷ್ಯ- ಒಂದು ಮತದ ಶಕ್ತಿ” ಎಂಬ ವಿಷಯದ ಬಗ್ಗೆ ರಾಷ್ಟ್ರೀಯ ಮತದಾರರ ಜಾಗೃತಿ ಸ್ಪರ್ಧೆಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಲಾಗಿದೆ. ನಗರದ ಜನತೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ ರಸಪ್ರಶ್ನೆ ಸ್ಪರ್ಧೆ, ಸ್ಲೋಗನ್ ಸ್ಪರ್ಧೆ, ಗಾಯನ ಸ್ಪರ್ಧೆ, ಚಿತ್ರೀಕರಣ ಸ್ಪರ್ಧೆ ಹಾಗೂ ಪೋಸ್ಟರ್ ವಿನ್ಯಾಸ ಸ್ಪರ್ಧೆ ಸೇರಿದಂತೆ 5 ಬಗೆಯ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಈ ಸ್ಪರ್ಧೆಯಲ್ಲಿ ಸಂಸ್ಥೆ, ವೃತ್ತಿಪರ ಹಾಗೂ ಹವ್ಯಾಸಿ ಎಂಬ ಮೂರು ವರ್ಗಗಳಲ್ಲಿ ವಿಂಗಡಿಸಿ ಆ ಮೂಲಕ ಬಹುಮಾಹನಗಳನ್ನು ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಓದಿ: ತಿರುಮಲದಲ್ಲಿ ಗೋವಿಂದಾನಂದ ಯಾತ್ರೆಗೆ ಪೊಲೀಸರ ಅಡ್ಡಿ.. ಹನುಮ ಜನ್ಮಭೂಮಿ ವಿವಾದ ಮತ್ತಷ್ಟು ಜಟಿಲ
ರಾಷ್ಟ್ರೀಯ ಮತದಾರರ ಜಾಗೃತಿ ಸ್ಪರ್ಧೆಯಲ್ಲಿ ಭಾಗವಹಿಸುವವರು ಸ್ಪರ್ಧೆಯ ವೆಬ್‌ಸೈಟ್(http://ecisveep.nic.in/contest)ನಲ್ಲಿ ವಿವರವಾದ ಮಾರ್ಗಸೂಚಿಗಳು, ನಿಯಮಗಳು, ಮತ್ತು ಷರತ್ತುಗಳ ಮೂಲಕ ಹೋಗಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವ ಸಿಲಿಕಾನ್ ಸಿಟಿಯ ನಾಗರಿಕರು ವೆಬ್‌ಸೈಟ್‌ನಲ್ಲಿ ರಿಜಿಸ್ಟರ್ ಮಾಡಿಕೊಂಡು, ಸಂಬಂಧಿಸಿದ ಎಲ್ಲಾ ರೀತಿಯ ಸಂಪೂರ್ಣ ವಿವರ ( ಹೆಸರು, ಸ್ಪರ್ಧಿಸುತ್ತಿರುವ ವರ್ಗದ ವಿವರವನ್ನು ಇ-ಮೆಲ್‌ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು)ಗಳನ್ನು 15 ಮಾರ್ಚ್ 2022 ರೊಳಗಾಗಿ voter-contest@eci.gov.in ನಮೂದಿಸಬೇಕು ಎಂದು ಗೌರವ್ ಗುಪ್ತಾ ಮಾಹಿತಿ ನೀಡಿದ್ದಾರೆ.