ಬೆಂಗಳೂರು : ನಾಲ್ಕು ದಶಕಗಳ ಕಾಲ ನನ್ನ ಕನಸು ಏನಿತ್ತೋ, ಆ ಕನಸನ್ನು ನನಸು ಮಾಡುವಲ್ಲಿ ನನ್ನ ಪಕ್ಷದ ಮುಖಂಡರು, ಸರ್ವರು ನನ್ನನ್ನು ಒಮ್ಮತದಿಂದ ಆಯ್ಕೆ ಮಾಡಿದ್ದಾರೆ. ಸಂಘಟನೆಗೆ ಒಂದೆಡೆ ಬೆಲೆ ಕೊಟ್ಟಿದ್ದಾರೆ. ಮತ್ತೊಂದೆಡೆ ವ್ಯಕ್ತಿತ್ವಕ್ಕೂ ಬೆಲೆ ಕೊಟ್ಟಿದ್ದಾರೆ. ಆದ್ದರಿಂದ ಎಲ್ಲರಿಗೂ ನಾನು ಋಣಿಯಾಗಿದ್ದೇನೆ. ಪಕ್ಷ ನನ್ನ ಗುರುತಿಸಿರುವುದು ನನ್ನ ಇಡೀ ದಲಿತ ಸಮುದಾಯಕ್ಕೆ ಕೊಟ್ಟಿರುವ ಕೊಡುಗೆ ಎಂದು ಬಿಜೆಪಿ ಟಿಕೆಟ್ ಪಡೆದುಕೊಂಡ ಛಲವಾದಿ ನಾರಾಯಣಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ದಲಿತರನ್ನು ಕೇವಲ ವೋಟ್ ಬ್ಯಾಂಕ್ ಮಾಡಿಕೊಂಡು ಬಂದಿದೆ. ಅವರು ಎಲ್ಲರನ್ನೂ ದಮನ ಮಾಡುವ ಕೆಲಸವನ್ನು ಮಾಡುತ್ತಿದ್ದರು. ಹಾಗಾಗಿ, ನಾನು ನನ್ನ ದಲಿತ ಸಮುದಾಯವನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದೇನೆ. ಅದರಲ್ಲಿಯೂ ಬಿಜೆಪಿ ಯಾವತ್ತೂ ಕೂಡ ದಲಿತ ಪರವಾಗಿಯೇ ಇರುವ ಪಕ್ಷ ಎಂದರು.
ಮೋದಿ ಹಾಗೂ ಇಲ್ಲಿ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲ್, ಯಡಿಯೂರಪ್ಪ ಎಲ್ಲರೂ ಸೇರಿ ನಮ್ಮ ದಲಿತ ಸಮುದಾಯವನ್ನು ಗೌರವಿಸುವ ಕೆಲಸವನ್ನು, ನಮಗೆ ಹೆಚ್ಚಿನ ಆದ್ಯತೆಯನ್ನು ಕೊಡುವ ಕೆಲಸವನ್ನು ಮಾಡುತ್ತಿದ್ದಾರೆ.
ಇದು ನನಗೆ ಕೊಟ್ಟಿರುವ ಅಧಿಕಾರವಲ್ಲ, ದೊಡ್ಡ ಜವಾಬ್ದಾರಿ. ಈ ಜವಾಬ್ದಾರಿಯನ್ನು ನಿರ್ವಹಿಸಲು ಮತ್ತಷ್ಟು ಪ್ರೇರಿತರಾಗಿದ್ದೇನೆ. ಇಡೀ ರಾಜ್ಯವನ್ನು ಮತ್ತಷ್ಟು ವೇಗವಾಗಿ ಸುತ್ತಿ ದಲಿತ ಸಮುದಾಯವನ್ನು ಪಕ್ಷಕ್ಕೆ ಜೋಡಿಸುವ ಕೆಲಸವನ್ನು ನಾನು ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್ನಲ್ಲಿ ಪಿಯುಸಿ ಓದಿ ಬಿಜೆಪಿಯಲ್ಲಿ ನರ್ಸರಿ ಸೇರಬೇಕಿತ್ತಾ?: ತತ್ವ ಸಿದ್ಧಾಂತವನ್ನು ಒಪ್ಪಿ ಯಾರೇ ಕೂಡ ಪಕ್ಷಕ್ಕೆ ಬಂದ ನಂತರ ಈಗ ಬಂದವರು ಮುಂದೆ ಬಂದವರು ಹಿಂದೆ ಬಂದವರು ಎನ್ನುವ ಪ್ರಶ್ನೆ ಬರುವುದಿಲ್ಲ. ಹಾಗಿದ್ದರೆ, ಹೈಕಮಾಂಡ್ ನನ್ನನ್ನು ಆಯ್ಕೆ ಮಾಡುತ್ತಿರಲಿಲ್ಲ. ಹಾಗಾಗಿ, ಆ ಪ್ರಶ್ನೆ ಇಲ್ಲಿ ಬರುವುದಿಲ್ಲ. ನಾನು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಾಜಕಾರಣದಲ್ಲಿ ಇದ್ದೇನೆ.
ಮೈಸೂರಿನಲ್ಲಿ ಪಿಯುಸಿ ಮಾಡಿ ಬೆಂಗಳೂರಿಗೆ ಬಂದು ನರ್ಸರಿಗೆ ಸೇರಬೇಕಾ? ಎಲ್ಲೇ ಇದ್ದರೂ ನಮಗೆ ನಮ್ಮದೇ ಆದ ಬೆಲೆ ಇರುತ್ತದೆ. ಪಕ್ಷದ ಮುಖಂಡರು ಅದನ್ನು ಗಮನಿಸಿ ಅವಕಾಶ ಕೊಟ್ಟಿದ್ದಾರೆ. ಹಾಗಾಗಿ, ವಲಸಿಗರಿಗೆ ಟಿಕೆಟ್ ಕೊಡಲಾಗಿದೆ ಎಂದು ಬೇರೆಯವರು ಮಾತನಾಡುವ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಪಕ್ಷ ಸಂಘಟನೆಗಾಗಿ ನನಗೆ ಅವಕಾಶ ಕೊಟ್ಟಿದ್ದಾರೆ ಎಂದು ಟಿಕೆಟ್ ನೀಡಿದ್ದನ್ನು ಸಮರ್ಥಿಸಿಕೊಂಡರು.
ಇದನ್ನೂ ಓದಿ: ಪರಿಷತ್ ಚುನಾವಣೆ ನಾಮಪತ್ರಕ್ಕಿಂದು ಕೊನೆ ದಿನ: ಬಿಡುಗಡೆಯಾಗದ ಬಿಜೆಪಿ ಪಟ್ಟಿ, ಸಂಭಾವ್ಯರ ದೌಡು!