ಬೆಂಗಳೂರು: ಆರ್‌ಎಸ್‌ಎಸ್ ಕಾರ್ಯಕರ್ತ ವರುಣ್ ಹತ್ಯೆಗೆ ಯತ್ನಿಸಿದ ಆರೋಪಿಗಳನ್ನು ಜ. 4ರವರೆಗೆ ಮತ್ತೆ ನಾಲ್ಕು ದಿನಗಳ ಕಾಲ ಪೊಲೀಸರ ಕಸ್ಟಡಿಗೆ ನೀಡಿ ನಗರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶ ಹೊರಡಿಸಿದೆ.
ನಗರ ಪೊಲೀಸರು ಇಂದು ಬೆಂಗಳೂರಿನ 8ನೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಆರೋಪಿಗಳಾದ ಇರ್ಫಾನ್, ಸೈಯದ್ ಅಕ್ಬರ್, ಸೈಯದ್ ಸಿದ್ದಿಕ್ ಅಕ್ಬರ್, ಅಕ್ಬರ್ ಪಾಷಾ, ಸನಾ ಹಾಗು ಸಾದಿಕ್ ರನ್ನು ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಮತ್ತೆ ತಮ್ಮ ವಶಕ್ಕೆ ನೀಡಬೇಕೆಂದು ಮನವಿ ಮಾಡಿದರು. ಈ ಮನವಿ ಪುರಸ್ಕರಿಸಿದ ನ್ಯಾಯಾಲಯ ಆರೋಪಿಗಳನ್ನು ಪೊಲೀಸರ ಸುಪರ್ದಿಗೆ ನೀಡಿದೆ.
ಪ್ರಕರಣದ ಹಿನ್ನೆಲೆ:
ಇತ್ತೀಚೆಗೆ ನಗರದ ಟೌನ್ ಹಾಲ್ ಎದುರು ನಡೆದಿದ್ದ ಸಿಎಎ ಹಾಗೂ ಎನ್ಆರ್ಸಿ ಪರ ಸಭೆಯಲ್ಲಿ ಭಾಗವಹಿಸಿದ್ದ ಆರ್‌ಎಸ್‌ಎಸ್ ಕಾರ್ಯಕರ್ತ ವರುಣ್ ಸಭೆ ಮುಗಿಸಿ ಹಿಂದಿರುಗುವಾಗ ಆರೋಪಿಗಳು ದಾಳಿ ನಡೆಸಿ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕಲಾಸಿಪಾಳ್ಯ ಠಾಣೆ ಪೊಲೀಸರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದರು. ಸೋಮವಾರ ಪೊಲೀಸರ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಆರೋಪಿಗಳನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಗಿತ್ತು.