ಹೊಸಕೋಟೆ : ಕೊರೊನಾ ಸಂಪೂರ್ಣವಾಗಿ ನಾಶವಾಗಿಲ್ಲ. ಇನ್ನೂ ಎಚ್ಚೆತ್ತು ನಡೆಯುವುದು ಅನಿವಾರ್ಯ. ಆದ್ರೆ, ಪೌರಡಳಿತ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವ ಮೂಲಕ ಕೋವಿಡ್ ನಿಯಮ ಗಾಳಿಗೆ ತೂರಿದ್ದಾರೆ.
ನಗರದ ಕನಕ ಭವನದಲ್ಲಿ ಸಾವಿರಾರು ಜನರೊಂದಿಗೆ ಕೇಕ್ ಕಟ್ ಮಾಡುವ ಮೂಲಕ ಎಂಟಿಬಿ ನಾಗರಾಜ್ ಅವರು ಅಭಿಮಾನಿಗಳು ಮತ್ತು ಕಾರ್ಯಕರ್ತರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಮಾಯವಾಗಿತ್ತು. ಹೊಸಕೋಟೆ ಟೌನಿನ ಕೆಇಬಿ ಸರ್ಕಲ್ ಬಳಿ ಜನರಿಗೆ ಭರ್ಜರಿ ಬಿರಿಯಾನಿ ಹಂಚಲಾಯಿತು.
ಈ ಸಂದರ್ಭದಲ್ಲಿ ಬಿರಿಯಾನಿಗಾಗಿ ಜನ ಮುಗಿಬಿದ್ದರು. ಇದರಿಂದ ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಗಿ ಸಾರ್ವಜನಿಕರು ಪರದಾಡುವಂತಾಯಿತು. ಹುಟ್ಟುಹಬ್ಬ ಆಚರಣೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಎಂಟಿಬಿ, ಕೋವಿಡ್ ಕಾರಣದಿಂದ ಅದ್ಧೂರಿ ಹುಟ್ಟುಹಬ್ಬ ಆಚರಣೆ ಬೇಡ ಎಂದು ಹೇಳಿದ್ದೆ. ಆದರೂ ಕೆಲವರು ಆಚರಣೆ ಮಾಡಿದ್ದಾರೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಹೇಳಿದರು.
ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಎಂಟಿಬಿ ನಾಗರಾಜ್, ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ, ಯಡಿಯೂರಪ್ಪನವರೇ ನಮ್ಮ ಮುಖ್ಯಮಂತ್ರಿಗಳು. ಒಂದು ವೇಳೆ ಕುರ್ಚಿ ಖಾಲಿ ಆದರೆ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಹೇಳಿದರು.
ಮುಖ್ಯಮಂತ್ರಿ ಬದಲಾವಣೆ ಆದರೂ ನಮ್ಮ ಸಚಿವ ಸ್ಥಾನಕ್ಕೆ ಯಾವುದೇ ತೊಂದರೆ ಆಗಲ್ಲ. ಬಿಜೆಪಿಯಲ್ಲಿ ನಾವು 11 ಜನ ಸಚಿವರಾಗಿದ್ದೇವೆ, ಯಾರೇ ಸಿಎಂ ಆದರೂ ಇನ್ನೂ ಎರಡು ವರ್ಷ ನಾವೇ ಸಚಿವರಾಗಿ ಮುಂದುವರೆಯುತ್ತೇವೆ ಎಂದು ಹೇಳಿದರು.