ಬೆಂಗಳೂರು/ಹೊಸಕೋಟೆ: ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಗೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವರ ಬೆಂಬಲಿಗರು ಹಣ ಹಂಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನೇ ಆಧಾರವಾಗಿಟ್ಟುಕೊಂಡು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ವಿಧಾನಪರಿಷತ್ ಸದಸ್ಯ ಪ್ರಕಾಶ ರಾಥೋಡ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣ ಹಂಚಿಕೆ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಲಿದ್ದೇವೆ. ಅಲ್ಲದೆ, ಇದಕ್ಕೂ ಮೊದಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜಾತಿ ಆಧಾರದ ಮೇಲೆ ಮತ ಕೇಳಿದ್ದರು. ಜನಪ್ರತಿನಿಧಿ ಕಾಯ್ದೆ ಆಧಾರದಲ್ಲಿ ಪ್ರಕರಣ ದಾಖಲಿಸಬೇಕು ಎಂದು ಆಯೋಗಕ್ಕೆ ಮನವಿ ಮಾಡಿದ್ದೆವು. ಆಯೋಗ ಈಗ ಪ್ರಕರಣ ದಾಖಲಿಸಿದೆ. ಆದರೆ, ಅದು ಯಾವುದೋ ಪಿಟಿ ಕೇಸ್ ರೀತಿಯಲ್ಲಿ ದಾಖಲಿಸಿದೆ. ಬಿಎಸ್ವೈ ಅರಿವಿದ್ದು ಅಪರಾಧ ಮಾಡಿದ್ದಾರೆಂದು ಕಾಂಗ್ರೆಸ್ ಆರೋಪಿಸುತ್ತಿದೆ. ಇದೇ ಆಧಾರದ ಮೇಲೆ ದೂರು ದಾಖಲಿಸಿಕೊಳ್ಳುವಂತೆ ಮತ್ತೊಮ್ಮೆ ಮನವಿ ಮಾಡುತ್ತೇವೆ ಎಂದರು.
ಇನ್ನಷ್ಟು ದೂರು: ಇದರ ಜೊತೆಗೆ ಇನ್ನು ಹಲವು ಪ್ರಕರಣಗಳನ್ನು ದಾಖಲಿಸಲು ಮುಂದಾಗಿದ್ದೇವೆ. ಕೆ.ಆರ್.ಪುರಂ ಬೂತ್ ರಿಗ್ಗಿಂಗ್ ಮಾಡಲು ಮುಂದಾಗಿದ್ದಾರೆ. ಬೂತ್ಗಳನ್ನು ತಮ್ಮ ವಶಕ್ಕೆ ಪಡೆದು ನಮ್ಮ ಕಾರ್ಯಕರ್ತರು ಅಲ್ಲಿಗೆ ಬರದಂತೆ ಮಾಡಲು ಬಿಜೆಪಿ ವ್ಯವಸ್ಥೆ ಮಾಡಿಕೊಂಡಿದೆ. ಈ ಎಲ್ಲಾ ಬೂತ್ಗಳಲ್ಲಿ ಅರೆಸೇನಾ ತುಕಡಿ ಹಾಕಬೇಕು ಎಂದು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದರು.
ಎಂಟಿಬಿ ನಾಗರಾಜ್ ಅವರ ಹಣ ಹಂಚಿಕೆಯ ವಿಡಿಯೋ ಸಿಕ್ಕಿದೆ. ಚುನಾವಣಾ ಆಯೋಗಕ್ಕೆ ಹಣ ಹಂಚುತ್ತಿರುವ ಸಂಬಂಧ ದೂರು ನೀಡುತ್ತೇವೆ. ಎಂಟಿಬಿ ಸ್ಪರ್ಧೆಯನ್ನೇ ಅನರ್ಹಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇವೆ ಎಂದು ಹೇಳಿದ ಅವರು ಎಲ್ಲಾ ಕ್ಷೇತ್ರದಲ್ಲೂ ಬಿಜೆಪಿ ನಾಯಕರು ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಜೆಪಿ ನಾಯಕರ ಕಾರುಗಳು ತೆರಳುತ್ತಿವೆ. ಇಲ್ಲಿ ಎಲ್ಲಾ ಕಾರುಗಳನ್ನು ತಪಾಸಣೆ ಮಾಡುತ್ತಿದ್ದಾರೆ. ಆದರೆ, ಸಂಸದ ಪ್ರತಾಪ್ ಸಿಂಹ, ಸಿಎಂ ಮಗ ವಿಜಯೇಂದ್ರ ಅವರ ಕಾರುಗಳನ್ನು ಹಾಗೆಯೇ ಬಿಟ್ಟಿದ್ದಾರೆ. ಬಿಜೆಪಿ ನಾಯಕರು ಹತಾಶರಾಗಿ ನೀತಿ ಸಂಹಿತೆ ಉಲ್ಲಂಘಿಸುವ ಮೂಲಕ ಅಕ್ರಮವಾಗಿ ಚುನಾವಣೆ ಎದುರಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.