ಬೆಂಗಳೂರು: 'ಕಾವೇರಿ ನೀರಿನ ವಿಚಾರದಲ್ಲಿ ರಾಜಕೀಯ ಮಾಡಬಾರದು' ಎಂದು ಮಂಡ್ಯದ ನೂತನ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ರು
ನಿನ್ನೆಯಷ್ಟೆ ಮಂಡ್ಯದ ಜೆಡಿಎಸ್ ನಾಯಕರು ಸುಮಲತಾ ವಿರುದ್ಧ ಗೂಬೆ ಕೂರಿಸುವ ಕೆಲಸ ಮಾಡಿದ್ದರು. ನಗರದಲ್ಲಿಂದು ಇದಕ್ಕೆ ಗರಂ ಆಗಿಯೇ ಉತ್ತರ ನೀಡಿರುವ ಸುಮಲತಾ, ಚುನಾವಣೆ ಸಮಯದಲ್ಲಿ ಅವರು ಯಾವ ರೀತಿ ನಡೆದುಕೊಂಡಿದ್ದಾರೆ, ಏನೆಲ್ಲ ಮಾತನಾಡಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ಜನರೂ ಕೂಡ ಅವರಿಗೆ ಯಾವ ರೀತಿ ರೆಸ್ಪಾನ್ಸ್ ಕೊಟ್ಟಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಈಗಲಾದರೂ ಅವರು ಪಾಠ ಕಲಿಯಬೇಕು. ನನ್ನ ಬಗ್ಗೆ ಮಾತಾಡೋದರಿಂದ ಐದು ನಿಮಿಷ ಪಬ್ಲಿಸಿಟಿ ಸಿಗಬಹುದು. ಅವರಿಗೆ ನಾನು ಉತ್ತರ ಕೊಡಲ್ಲ. ಮಂಡ್ಯದಲ್ಲಿ ಎಂಟು ಜನ ಶಾಸಕರಿದ್ದಾರೆ, ಅವರೆಲ್ಲಗೂ ಜನ ಮತ ಹಾಕಿ ಜವಾಬ್ದಾರಿ ಕೊಟ್ಟಿದ್ದಾರೆ. ಅವರೇನು ರಾಜೀನಾಮೆ ಕೊಟ್ಟಿಲ್ಲ. ಒಂದು ವೇಳೆ ಅವರು ರಾಜೀನಾಮೆ ಕೊಟ್ಟಿದ್ದೇ ಆಗಿದ್ರೆ, ಕಾವೇರಿ ನೀರಿನ ಸಮಸ್ಯೆ ಬಗೆಹರಿಸುವುದು ಅವರ ಜವಾಬ್ದಾರಿಯಲ್ಲ ಎಂದು ಒಪ್ಪಿ ಕೊಳ್ಳುತ್ತೇನೆ ಎಂದರು.
ಇದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜವಬ್ದಾರಿ. ಎಲ್ಲರು ಒಗ್ಗಟ್ಟಾಗಿ ನಿಂತರೆ ಕಾವೇರಿ ಹೋರಾಟ ನಡೆಸಬಹುದು. ಚುನಾವಣೆ ಥರ ರಾಜಕೀಯ ಆಟವಾಡಿದ್ರೆ ರೈತರಿಗೆ ನಷ್ಟ. ರೈತರಿಗೆ ತೊಂದರೆಯಾಗುವ ರೀತಿಯಲ್ಲಿ ಮಾತಾಡಬಾರದು ಎಂದು ಮನವಿ ಮಾಡಿಕೊಂಡ್ರು.
ಈಗಾಗಲೇ ನಾನು ಕಾವೇರಿ ವಿಷಯವಾಗಿ ನಾನು ತಜ್ಞರ ಜತೆ ಚರ್ಚೆ ನಡೆಸಿದ್ದೇನೆ. ನಾನು ಇನ್ನೂ ಪ್ರಮಾಣ ವಚನ ಸ್ವೀಕರಿಸಿಲ್ಲ, ಅಷ್ಟರಲ್ಲೇ ರಾಜಕಾರಣ ತರ್ತಿದ್ದಾರೆ. ಈ ರೀತಿ ಮಾಡಿದ್ರೆ ಜನರು ನಂಬೋದಿಲ್ಲ. ಅಲ್ಲದೇ ಇದು ಅರೋಗ್ಯಕರ ವಾತಾವರಣವೂ ಅಲ್ಲ. ಇಂತ ಸಮಯದಲ್ಲಿ ನಾವು ರೈತರ ಪರವಾಗಿ ನಿಲ್ಲಬೇಕು. ಅವರಿಗೋಸ್ಕರ ನಾವು ಏನನ್ನು ಮಾಡಬೇಕು ಯೋಚನೆ ಮಾಡಬೇಕೆ ವಿನಃ, ಚುನಾವಣೆಯಲ್ಲಿ ಸೋತಿರುವಂತ ಕೋಪ ಹಾಗೂ ಖಿನ್ನತೆಯನ್ನು ಹೊರಹಾಕುವ ಸಮಯ ಇದಲ್ಲ ಎಂದರು.