ಬೆಂಗಳೂರು: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿದ್ರೆ ತಪ್ಪೇನಿಲ್ಲ, ಈಗಲೂ ಯಡಿಯೂರಪ್ಪನವರೇ ನಮ್ಮ ನಾಯಕ ಎಂದು ಎದೆತಟ್ಟಿ ಹೇಳುತ್ತೇನೆ ಎಂದು ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದರು.
ಆರ್.ಟಿ ನಗರದಲ್ಲಿರುವ ಸಿಎಂ ನಿವಾಸಕ್ಕೆ ಶಾಸಕ ರೇಣುಕಾಚಾರ್ಯ ಭೇಟಿ ನೀಡಿ, ಜಿಲ್ಲೆಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದರು. ಜಿಲ್ಲೆಯಲ್ಲಿ ಆರು ಶಾಸಕರಿದ್ದು, ಜಿಲ್ಲೆಯನ್ನು ಕಡೆಗಣಿಸದಂತೆ ಮನವಿ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ನಮ್ಮ ಜಿಲ್ಲೆಗೆ ಒಂದು ಸಚಿವ ಸ್ಥಾನ ಕೇಳಿದ್ದೇವೆ. ಮಧ್ಯ ಕರ್ನಾಟಕಕ್ಕೆ ಅವಕಾಶ ಕೊಡಿ ಎಂದು ಅರುಣ್ ಸಿಂಗ್, ಸಿಎಂ ಅವರನ್ನು ಕೇಳಿಕೊಂಡಿದ್ದೇವೆ. ಸಚಿವ ಸ್ಥಾನ ಕೇಳೋದ್ರಲ್ಲಿ ತಪ್ಪೇನಿದೆ ಎಂದು ಬೇಡಿಕೆ ಸಮರ್ಥಿಸಿಕೊಂಡರು.
ಯಾವ ಖಾತೆ ಕೊಟ್ಟರೂ ಸಹ ಸಮರ್ಥವಾಗಿ ನಿಭಾಯಿಸುತ್ತೇನೆ, ಆದರೆ ಕೂಸು ಹುಟ್ಟುವುದಕ್ಕೆ ಮುನ್ನಾ ಕುಲಾವಿ ಹೊಲಿಸಿದ್ರು ಎನ್ನುವಂತೆ ಈಗಲೇ ಏನೂ ಹೇಳುವುದಿಲ್ಲ. ಯಾವ ಖಾತೆ ಬೇಕು ಎಂದು ನಾನು ಕೇಳುವುದಿಲ್ಲ, ಸಂಪುಟ ರಚನೆಯಾದ ಬಳಿಕ ಈ ಕುರಿತು ನೋಡೋಣ ಎಂದರು.
ನಾನು ಯಡಿಯೂರಪ್ಪನವರ ನೆರಳಲ್ಲಿ ಬೆಳೆದವನು. ಎಲ್ಲೋ ಇದ್ದವನನ್ನು ಇಷ್ಟು ಬೆಳೆಸಿರೋದು ಬಿಎಸ್ವೈ. ಇದನ್ನು ನಾನು ಎದೆ ಮುಟ್ಟಿ ಹೇಳುತ್ತೇನೆ. ಯಡಿಯೂರಪ್ಪ ನಮ್ಮ ನಾಯಕರು, ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾರೆ. ಸಿಎಂಗೆ ನಮ್ಮ ಸಂಪೂರ್ಣ ಸಹಕಾರವಿದೆ. ಹಾಗಾಗಿ ಅವರ ಮನೆಗೆ ಬರೋದು ತಪ್ಪಲ್ಲ, ಅಂದು ಯಡಿಯೂರಪ್ಪ ಜೊತೆ ಓಡಾಡುತ್ತಿದ್ದವನು ಇಂದು ಬೊಮ್ಮಾಯಿ ಹಿಂದೆ ಓಡಾಡುತ್ತಿದ್ದಾನೆ ಅಂತ ಅಲ್ಲ, ಉಸಿರಿರುವವರೆಗೂ ಯಡಿಯೂರಪ್ಪ ನಮ್ಮ ನಾಯಕ ಎಂದು ಬೊಮ್ಮಾಯಿ ನಿವಾಸಕ್ಕೆ ಬಂದಿದ್ದನ್ನು ಸಮರ್ಥಿಸಿಕೊಂಡರು.
ಜಗದೀಶ್ ಶೆಟ್ಟರ್ ಹಿರಿಯರು, ಅವರು ತ್ಯಾಗ ಮಾಡಲಿ ಅಂತ ಹೇಗೆ ಹೇಳಲಿ?, ಅವರು ಮುಖ್ಯಮಂತ್ರಿ ಆಗಿದ್ದವರು. ಪ್ರತಿಪಕ್ಷ ನಾಯಕರಾಗಿದ್ದವರು, ಸ್ಪೀಕರ್ ಆಗಿದ್ದವರು ಅವರ ನಿರ್ಧಾರದ ಬಗ್ಗೆ ನಾನು ಮಾತನಾಡಲು ಸಾಧ್ಯವಿಲ್ಲ. ಉಳಿದವರು ಅದೇ ನಿರ್ಧಾರ ತೆಗೆದುಕೊಳ್ಳುತ್ತಾರ ಅಂತ ಗೊತ್ತಿಲ್ಲ. ಮಾಧ್ಯಮದವರು ನನ್ನನ್ನು ಮಾತಿನಲ್ಲಿ ಕಟ್ಟಿಹಾಕಬೇಡಿ ಎಂದು ನಿರ್ಗಮಿಸಿದರು.
ಮಾಜಿ ಸಚಿವ ನಾಗೇಶ್ ಬೇಡಿಕೆ:
ಇನ್ನು ಮಾಜಿ ಸಚಿವ ನಾಗೇಶ್ ಕೂಡ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿ ಶುಭ ಕೋರಿದರು. ನಂತರ ಕೆಲಕಾಲ ರಾಜಕೀಯ ವಿಷಯಗಳ ಕುರಿತು ಮಾತುಕತೆ ನಡೆಸಿದರು. ಯಡಿಯೂರಪ್ಪ ಸಚಿವ ಸಂಪುಟ ಪುನಾರಚನೆ ವೇಳೆ ನನ್ನನ್ನು ಕೈಬಿಡಲಾಗಿತ್ತು, ಹಾಗಾಗಿ ಈಗ ಹೊಸ ಸಂಪುಟದಲ್ಲಿ ಅವಕಾಶ ಕೊಡಬೇಕು ಎಂದು ಮನವಿ ಮಾಡಿದರು.
ಮನವಿ ಆಲಿಸಿದ ಸಿಎಂ, ಹೈಕಮಾಂಡ್ ಜೊತೆ ಮಾತುಕತೆ ವೇಳೆ ವಿಷಯ ಪ್ರಸ್ತಾಪಿಸುವ ಭರವಸೆ ನೀಡಿದರು ಎನ್ನಲಾಗಿದೆ. ಸಿಎಂ ಭೇಟಿ ಬಳಿಕ ಈ ಕುರಿತು ಮಾಹಿತಿ ನೀಡಿದ ನಾಗೇಶ್, ಸಿಎಂ ಜೊತೆಗಿನ ಭೇಟಿ ವೇಳೆ ಸಚಿವ ಸ್ಥಾನದ ಬೇಡಿಕೆ ಇರಿಸಿದ್ದೇನೆ, ಸಕಾರಾತ್ಮಕ ಮಾತುಕತೆ ನಡೆದಿದೆ ಎಂದರು.