ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅವರ ಕ್ರಮk್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.
ಹೌದು, ಜಯನಗರದ ಐದನೇ ಹಂತದಲ್ಲಿರುವ ಬಿಬಿಎಂಪಿಯ ಸಾರ್ವಜನಿಕ ಗ್ರಂಥಾಲಯದ ನೆಲಮಹಡಿಯಲ್ಲೇ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕಚೇರಿ ಆರಂಭಿಸಲು ಹೊರಟಿರುವುದು ತೀವ್ರ ವಿರೋಧಕ್ಕೆ ಕಾರಣವಾಗಿದೆ. ಕಟ್ಟಡದ ಮೊದಲ ಹಾಗೂ ಎರಡನೇ ಅಂತಸ್ತಿನಲ್ಲಿ ಪುಸ್ತಕ ಓದಲು ಅವಕಾಶವಿದೆ. ನೆಲಮಹಡಿಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರ ನಡೆಸಲಾಗುತ್ತಿದೆ. ಇದೀಗ ನೆಲಮಹಡಿಯನ್ನು ಬಿಜೆಪಿ ಸಂಸದರ ಕಚೇರಿಗಾಗಿ ನವೀಕರಣ ಮಾಡುತ್ತಿದ್ದು, ಇದರಿಂದ ತರಬೇತಿ ಶಿಬಿರಕ್ಕೆ ಅಡ್ಡಿಯಾಗುತ್ತಿದೆ ಎಂದು ವಿದ್ಯಾರ್ಥಿಗಳ ಪೋಷಕರು ಆರೋಪಿಸಿದ್ದಾರೆ.
ಈ ಹಿಂದೆ ಸಂಸದರಾಗಿದ್ದ ಅನಂತ್ ಕುಮಾರ್ ಅವರ ಕಚೇರಿ ಬೇಡ, ತನಗೆ ಹೊಸ ಕಚೇರಿಯನ್ನ ನೀಡಿ ಅಂತ ತೇಜಸ್ವಿ ಸೂರ್ಯ ಈ ಹಿಂದಿನ ಬಿಬಿಎಂಪಿ ಆಯುಕ್ತರಿಗೆ ಮನವಿ ಮಾಡಿದ್ರು. ಸಂಸದರ ಮನವಿಗೆ ಸ್ಪಂದಿಸಿದ್ದ ಹಿಂದಿನ ಆಯುಕ್ತ ಮಂಜುನಾಥ್ ಪ್ರಸಾದ್ ಅವರು, ತೇಜಸ್ವಿ ಸೂರ್ಯ ಅಪೇಕ್ಷೆಯಂತೆ ಪಟ್ಟಾಭಿರಾಮನಗರ ವಾರ್ಡಿನಲ್ಲಿ ಕಚೇರಿಯನ್ನ ಮಂಜೂರು ಮಾಡಿದ್ದರು. ಇದರಿಂದ ಶಾಲಾ ಮಕ್ಕಳು ಸೇರಿದಂತೆ, ಐಎಎಸ್, ಐಪಿಎಸ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಅನಾನುಕೂಲವಾಗಿದೆ. ತಮಗೆ ನ್ಯಾಯ ಕೊಡಿಸಿ ಅಂತ ಸಾಮಾಜಿಕ ಜಾಲತಾಣದಲ್ಲಿ ಸಂಸದರ ನಡೆಗೆ ಆಕ್ಷೇಪಣೆಗಳು ವ್ಯಕ್ತವಾಗಿವೆ.
ಇನ್ನು ಈ ಬಗ್ಗೆ ಮಾತನಾಡಿದ ಮೇಯರ್ ಗಂಗಾಂಬಿಕೆ ಅವರು, ಸಂಸದರ ಕಚೇರಿಯಿಂದಲೂ ಈ ಬಗ್ಗೆ ಮಾಹಿತಿ ಪಡೆಯಲಾಗಿದೆ. ಖಾಲಿ ಇದ್ದ ಕಟ್ಟಡ ಮಾತ್ರ ಬಳಸುತ್ತಿದ್ದೇವೆ ಎಂದಿದ್ದಾರೆ. ಆದ್ರೆ ಸಾರ್ವಜನಿಕ ಗ್ರಂಥಾಲಯದ ಜಾಗ ಬಳಸುವ ಹಾಗಿಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.