ಬೆಂಗಳೂರು : ರಾಜ್ಯದಲ್ಲಿ ಸದ್ದು ಮಾಡಿರುವ 40% ಕಮಿಷನ್ ಆರೋಪದ ಬಗ್ಗೆ ಕೇಂದ್ರ ಗೃಹ ಇಲಾಖೆ ತನಿಖೆಗೆ ಮುಂದಾಗಿದೆ. ಇದರ ಬದಲಾಗಿ ಸಿಬಿಐ, ಐಟಿ ಇಲಾಖೆಯಿಂದ ತನಿಖೆ ನಡೆಸಿದ್ದರೆ ಎಲ್ಲ ಸತ್ಯಗಳು ಬಯಲಾಗುತ್ತಿದ್ದವು ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, 40% ಆರೋಪದ ಬಗ್ಗೆ ತನಿಖೆಗೆ ಕೇಂದ್ರ ಗೃಹ ಇಲಾಖೆ ಮುಂದಾಗಿರುವುದು ಕೇವಲ ಬೆದರಿಕೆಯ ತಂತ್ರಗಾರಿಕೆಯಾಗಿದೆ. ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಮಾಡಿಸಬೇಕಿತ್ತು. ಆಗ ರಾಜ್ಯದ ಕಮಿಷನ್ ಬಗ್ಗೆ ಗೊತ್ತಾಗುತಿತ್ತು. ಬಿಜೆಪಿ ಶಾಸಕರೇ ಪರ್ಸೆಂಟೇಜ್ ಬಗ್ಗೆ ಮಾತನಾಡಿದ್ದಾರೆ. ಎಲ್ಲಾ ಸಚಿವರ ಮೇಲೂ ಆರೋಪ ಇದೆ. ಪೊಲೀಸ್, ಕಂದಾಯ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಒಳಹೊಕ್ಕು ನೋಡಿದರೆ ಕಮಿಷನ್ ದಂಧೆ ಬಗ್ಗೆ ಗೊತ್ತಾಗುತ್ತದೆ ಎಂದರು.
ಕೇಂದ್ರದ ವಿರುದ್ಧ ಟೀಕೆ : ಪ್ರತಿಪಕ್ಷಗಳನ್ನು ಹಣಿಯಲು ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯ(ಇಡಿ), ತೆರಿಗೆ ಇಲಾಖೆ(ಐಟಿ)ಯಂತಹ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್ ಆರೋಪ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದಾಗ 40% ಬಗ್ಗೆ ಮಾತನಾಡಿಲ್ಲ. ಈಗ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರನ್ನು ಹೆದರಿಸುವುದಕ್ಕೆ ಕರೆದಿರಬಹುದು ಎಂದು ಆಪಾದಿಸಿದರು.
ಪ್ರಧಾನಿ ರಾಜ್ಯಕ್ಕೆ ಬಂದ ಸಮಯದಲ್ಲಿ ಹಾಕಲಾಗಿದ್ದ ರಸ್ತೆ ಕಿತ್ತು ಹೋಗಿದ್ದನ್ನು ನೋಡಿದರೆ, ಭ್ರಷ್ಟಾಚಾರ ಆಗಿದೆ ಎಂಬುದು ಗೊತ್ತಾಗುತ್ತದೆ. ಈ ಕುರಿತು ಅಧಿಕಾರಿಗಳ ವಿರುದ್ಧ ಯಾಕೆ ಕ್ರಮ ಜರುಗಿಸಲಿಲ್ಲ?. ಇದು ಪರ್ಸಂಟೇಜ್ ಸರ್ಕಾರ ಅಲ್ಲವೇ ಎಂದು ಪ್ರಶ್ನಿಸಿದರು. ತಮಗೆ ಇಡಿ ನೋಟಿಸ್ ಕೊಟ್ಟಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇಡಿಯಿಂದ ನನಗೆ ಯಾವುದೇ ನೋಟಿಸ್ ಬಂದಿಲ್ಲ. ನೋಟಿಸ್ ಬಂದರೆ ಎದುರಿಸುತ್ತೇನೆ ಎಂದು ಹೇಳಿದರು.
ಅಮೀಬಾದಂತೆ ವಾರ್ಡ್ ವಿಂಗಡಣೆ : ಇನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ಗಳನ್ನು ಹಂಚಿಕೆ ಮಾಡಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ವಾರ್ಡ್ಗಳನ್ನು ಅಮೀಬಾದಂತೆ ಮನಸೋಇಚ್ಚೆ ವಿಂಗಡಿಸಲಾಗಿದೆ. ಅವುಗಳಿಗೆ ಹೊಸದಾಗಿ ನಾಮಕರಣ ಮಾಡಿ ಜನರ ಭಾವನೆಗಳನ್ನು ಕೆರಳಿಸಿದ್ದಾರೆ. ಸರ್ಕಾರಕ್ಕೆ ಬಿಬಿಎಂಪಿ ಚುನಾವಣೆ ಮಾಡುವ ಆಸಕ್ತಿಯೇ ಇಲ್ಲ. ಚುನಾವಣೆ ನಡೆದರೆ ಮಾತ್ರ ಅಭಿವೃದ್ಧಿ ಮಾಡಲು ಸಾಧ್ಯ ಎಂದು ಸುರೇಶ್ ಹೇಳಿದರು.
ಓದಿ : ರಾಜ್ಯದ ಜನರಿಗೆ ವಿದ್ಯುತ್ ದರ ಏರಿಕೆ ಶಾಕ್: ಜು.1ರಿಂದ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ ಬರೆ