ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ತನ್ನಿಬ್ಬರು ಮಕ್ಕಳಿಗೆ ಪೆಟ್ರೋಲ್ ಸುರಿದ ತಾಯಿ ಬಳಿಕ ತಾನೂ ಬೆಂಕಿಯಿಟ್ಟುಕೊಂಡಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಎಸ್.ಎಂ ಗೊಲ್ಲಹಳ್ಳಿಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಚಿಕಿತ್ಸೆ ಫಲಿಸದೇ ಇಂದು ಮೂವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ತಾಯಿ ಸಂಧ್ಯಾ(33), ಮತ್ತು ಆಕೆಯ 4 ಹಾಗೂ 2 ವರ್ಷದ ಮಕ್ಕಳು ಸಾವನ್ನಪ್ಪಿದ್ದಾರೆ.
ಯಲಹಂಕ ನಗರದ ಸಂಧ್ಯಾ 5 ವರ್ಷದ ಹಿಂದೆ ಎಸ್ ಎಂ ಗೊಲ್ಲಹಳ್ಳಿಯ ಶ್ರೀಕಾಂತ್ ಜೊತೆ ವಿವಾಹವಾಗಿದ್ದರು. ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದ ಶ್ರೀಕಾಂತ್ ಕುಟುಂಬಸ್ಥರನ್ನು ಚೆನ್ನಾಗಿ ನೋಡಿಕೊಂಡಿದ್ದರು. ಗಂಡ, ಮಕ್ಕಳು ಮತ್ತು ಅತ್ತೆ ಮಾವನ ಜೊತೆ ಸಂಧ್ಯಾ ಸುಖಿ ಜೀವನ ನಡೆಸುತ್ತಿದ್ದರು. ಆದ್ರೆ ಇದ್ದಕ್ಕಿದ್ದಂತೆ ಸಂಧ್ಯಾ ಈ ನಿರ್ಧಾರ ಕೈಗೊಂಡಿದ್ದಕ್ಕೆ ದುರಂತವೇ ನಡೆದಿದೆ.
ಅತ್ತೆ-ಮಾವ ಹೊರ ಹೋಗಿದ್ದರು ಮತ್ತು ಗಂಡ ಕೆಲಸಕ್ಕೆ ಹೋದಾಗ ಮೊದಲು 5 ಲೀಟರ್ ಪೆಟ್ರೋಲ್ ಅನ್ನು ತನ್ನ ಇಬ್ಬರು ಮಕ್ಕಳ ಮೇಲೆ ಸುರಿದು ನಂತರ ತನ್ನ ಮೇಲೂ ಸುರಿದುಕೊಂಡು ಸಂಧ್ಯಾ ಬೆಂಕಿ ಇಟ್ಟುಕೊಂಡಿದ್ದಾರೆ. ಉರಿಯುತ್ತಿದ್ದ ಬೆಂಕಿಯ ಜ್ವಾಲೆಯಲ್ಲಿ ಇಬ್ಬರು ಮಕ್ಕಳನ್ನು ಬಲವಾಗಿ ಹಿಡಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ತಿಳಿದುಬಂದಿದೆ.
ಈ ವೇಳೆ ಅವರ ಮನೆಯಿಂದ ಬರುತ್ತಿದ್ದ ಹೊಗೆಯನ್ನು ನೆರೆಹೊರೆಯವರು ಗಮನಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಸಂಧ್ಯಾ ಮತ್ತು ಆಕೆಯ ಮಕ್ಕಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೂವರೂ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ : 5 ವರ್ಷದ ಬಾಲಕಿ ಮೇಲೆ ಮಲ ತಂದೆಯಿಂದ ಅತ್ಯಾಚಾರ
ನಿನ್ನೆ ಅಂಗನವಾಡಿಯಿಂದ ಮಗಳನ್ನು ಸಂಧ್ಯಾ ಕರೆದೊಯ್ದಿದ್ದರು. ಇದೇ ತಿಂಗಳ 29 ರಂದು ಮಗಳ ಹುಟ್ಟಿದ ದಿನವಾಗಿತ್ತೆಂದು ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮಿದೇವಮ್ಮ ಕಣ್ಣೀರಿಟ್ಟರು.
ಸಂಧ್ಯಾಳ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆಸ್ತಿ ವಿಚಾರವಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಾಯಿ ಮಕ್ಕಳ ಆತ್ಮಹತ್ಯೆಗೆ ನಿಖರ ಕಾರಣ ತನಿಖೆ ಬಳಿಕ ತಿಳಿದುಬರಲಿದೆ.