ಬೆಂಗಳೂರು : ಎಸ್ಸಿ-ಎಸ್ಟಿ ಗಂಗಾ ಕಲ್ಯಾಣ ಯೋಜನೆಯಲ್ಲಿ 14,537 ಬೋರ್ ವೆಲ್ ಮಂಜೂರಾಗಿದ್ದು, ಇದರಲ್ಲಿ ಅವ್ಯವಹಾರ ಆಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಸಚಿವ ಕೆ.ಎಸ್ ಈಶ್ವರಪ್ಪ ಬಂಧನ ಹಾಗೂ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧದಲ್ಲಿ ಕಾಂಗ್ರೆಸ್ ನಾಯಕರು ಆಹೋರಾತ್ರಿ ಧರಣಿ ನಿರತರಾಗಿದ್ದಾರೆ.
ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಿಯಾಂಕ್ ಖರ್ಗೆ, ಈಶ್ವರಪ್ಪ ಅವರು ಇಂದು ಸಂಜೆ ಬೆಂಗಳೂರಿಗೆ ಆಗಮಿಸಿ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಆದರೆ, ನಮ್ಮ ಉದ್ದೇಶ ಕೇವಲ ಈಶ್ವರಪ್ಪ ರಾಜೀನಾಮೆ ಪಡೆಯುವುದು ಮಾತ್ರ ಇಲ್ಲ. 40 ಪರ್ಸೆಂಟ್ ಕಮಿಷನ್ ಎಲ್ಲ ಇಲಾಖೆಯಲ್ಲೂ ಇದೆ. ಇದನ್ನ ಕಿತ್ತೊಗೆಯಬೇಕು ಎಂದು ಆಗ್ರಹಿಸಿದರು.
ಆರ್ಡಿಪಿಆರ್ ಇಲಾಖೆಯ ಇಂಜನಿಯರ್ಗೆ ತನಿಖೆಗೆ ಕೊಟ್ಟಿದ್ರು, ವರದಿ 15 ದಿನದಲ್ಲಿ ಬರಬೇಕಿತ್ತು. ಆದರೆ, ಇನ್ನು ಕೆಲಸ ನಿಂತಿಲ್ಲ. ದೇವರಾಜ ಅರಸು ಹಿಂದುಳಿದ ವರ್ಗದ ಯೋಜನೆಯಲ್ಲಿ ಬೋರ್ ವೆಲ್ ಕೊರೆಯಲು 93 ಸಾವಿರ ನಿಗದಿ ಮಾಡುತ್ತಾರೆ. ಆದರೆ, ಎಸ್ಸಿ-ಎಸ್ಟಿಯಲ್ಲಿ 1 ಲಕ್ಷ 18 ಸಾವಿರ ರೂ.ನಿಗದಿ ಮಾಡುತ್ತಾರೆ. ನಾನು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಮಾಣಿಕರು ಎಂದು ತಿಳಿದಿದ್ದೆ. ಆದರೆ, ಅವರ ಆದೇಶ ನೋಡಿದರೆ ನನಗೆ ಅನುಮಾನ ಬರುತ್ತಿದೆ ಎಂದರು.
ಇನ್ನೂ 4 ವಿಕೆಟ್ ಪತನವಾಗಲಿದೆ: 431 ಕೋಟಿಯ ಯೋಜನೆ ಇದು. ತನಿಖೆ ಮುಗಿಯುವವರೆಗೂ ಕೆಲಸ ನಿಲ್ದಿಸಿದ್ದರೆ, ಏನಾಗುತ್ತಿತ್ತು. ಸಮಾಜ ಕಲ್ಯಾಣ ಇಲಾಖೆ ಸಚಿವರಿಗೂ 40 ಪರ್ಸೆಂಟ್ ಕಿಕ್ ಬ್ಯಾಕ್ ಹೋಗಿದೆ. ಹಿಂದಿನ ಸಚಿವರು, ಈಗಿನ ಸಚಿವರು ಇಬ್ಬರು ಇದರ ಹಿಂದೆ ಇದ್ದಾರೆ. ಈ ಬಗ್ಗೆ ಸರಿಯಾಗಿ ತನಿಖೆ ನಡೆದರೆ ಇನ್ನು ಎರಡು ವಿಕೆಟ್ ಬೀಳುತ್ತದೆ.
545 ಪಿಎಸ್ಐ ಪರೀಕ್ಷೆಯಲ್ಲೂ ಅವ್ಯವಹಾರ ಆಗಿದೆ. ಈ ಬಗ್ಗೆ ಅಭ್ಯರ್ಥಿಗಳೇ ದೂರು ನೀಡಿದ್ದರು. ಆದರೆ,ಗೃಹ ಸಚಿವರು ಪರಿಷತ್ನಲ್ಲಿ ಇದರಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ ಎಂದು ಉತ್ತರ ನೀಡಿದರು. ಒಬ್ಬ ಅಭ್ಯರ್ಥಿಯಿಂದ 70 ರಿಂದ 80 ಲಕ್ಷ ರೂ ಲಂಚ ಪಡೆದು ಆಯ್ಕೆ ಮಾಡಿದ್ದಾರೆ. ಅಧಿಕಾರಿಗಳು, ಗೃಹ ಸಚಿವರು ಇದರ ಹಿಂದೆ ಇದ್ದಾರೆ.
ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲಿಗೆ ಹೋಗಲು ಯಾವುದೇ ಸಚಿವರಿಗೂ ತಾಕತ್ತಿಲ್ಲ. ಇವರ 40 ಪರ್ಸಂಟೇಜ್ ವಿಚಾರದಲ್ಲಿ ಅಭ್ಯರ್ಥಿಗಳ ಭವಿಷ್ಯ ಹಾಳಾಗಿದೆ. ಈ ಎರಡು ಪ್ರಕರಣದಲ್ಲಿ ಇನ್ನೂ 4 ವಿಕೆಟ್ ಪತನವಾಗಲಿದೆ ಎಂದರು. ಸಿಎಂ ಅವರು ಈ ಪ್ರಕರಣವನ್ನ ಹೈಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ದಲ್ಲಿ ತನಿಖೆ ನಡೆಸಬೇಕು.
ಸರಿಯಾಗಿ ತನಿಖೆ ನಡೆಸಿದರೆ, ಅರ್ಧ ಸಚಿವ ಸಂಪುಟ ಬಿದ್ದು ಹೋಗುತ್ತದೆ. ಪಿಎಸ್ಐ ಪ್ರಕರಣದಲ್ಲಿ ಪೇಪರ್ ಎಲ್ಲಿ ಲೀಕಾಯ್ತು?. ಬಿಜೆಪಿಯ ಕಾರ್ಯದರ್ಶಿ ಶಾಲೆಯಲ್ಲಿ, ಆ ಕಾರ್ಯದರ್ಶಿ ಮನೆಗೆ ಗೃಹ ಸಚಿವರು ಹೋಗಿಲ್ವಾ?. ಈ ಎಲ್ಲಾ ದಾಖಲೆಯನ್ನ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುತ್ತೇವೆ.
ಬಿಜೆಪಿ ಪದಾಧಿಕಾರಿ ಶಾಲೆಯಲ್ಲಿ ಪ್ರಶ್ನೆ ಪತ್ರಿಕೆ ಲಿಕ್ ಆಗಿದೆ. ಅದರ ಬಗ್ಗೆ ನಮ್ಮ ಬಳಿ ಸಂಪೂರ್ಣ ಮಾಹಿತಿ ಇದೆ. ಗೃಹ ಸಚಿವ ಹೇಳಲಿ ಬಿಜೆಪಿ ಪದಾಧಿಕಾರಿ ಮನೆಗೆ ಹೋಗಿಲ್ಲ ಅಂತಾ. ನಮ್ಮ ಬಳಿ ಫೋಟೋ ಇದೆ. ಈಶ್ವರಪ್ಪ ಬಂಧನ ಆಗಲಿ. ಆ ಮೇಲೆ ಎಲ್ಲ ದಾಖಲೆ ಬಹಿರಂಗ ಪಡಿಸುತ್ತೇವೆ. ಸರ್ಕಾರದ ಸಚಿವರು ಆಲ್ ಔಟ್ ಆಗುತ್ತಾರೆ ಎಂದು ಹೇಳಿದರು.
ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದ ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ, ಪಿಎಸ್ಐ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಪರೀಕ್ಷೆ ಬರೆದ ಬಿಜೆಪಿ, ಆರ್ಎಸ್ಎಸ್ ಕಾರ್ಯಕರ್ತರನ್ನೇ ಆಯ್ಕೆ ಮಾಡಿದ್ದಾರೆ. ಈ ಬಗ್ಗೆ ನಮ್ಮ ಬಳಿ ಸಂಪೂರ್ಣ ದಾಖಲೆ ಇದೆ ಎಂದರು.
ಇದನ್ನೂ ಓದಿ: ವಿಧಾನಸೌಧದ ಗೋಡೆಗೆ ಹೊಡೆದ್ರೇ ಕಾಸು. ಕಾಸು.. ಕಾಸು... ಎನ್ನುತ್ತದೆ.. ಈಶ್ವರಪ್ಪ ಒಬ್ಬ ಸುಳ್ಳಿನ ಫ್ಯಾಕ್ಟರಿ ಚೇರ್ಮನ್.. ಡಿಕೆಶಿ