ದೊಡ್ಡಬಳ್ಳಾಪುರ : ಮೊಟ್ಟೆ ವ್ಯಾಪಾರಿಯನ್ನು ಹಿಂಬಾಲಿಸಿಕೊಂಡು ಬಂದು ಹೊಂಚು ಹಾಕಿ ಸ್ಕೂಟರ್ ಡಿಕ್ಕಿಯಲ್ಲಿಟ್ಟಿದ್ದ 4 ಲಕ್ಷ ರೂ. ಹಣವನ್ನು ದೋಚಿದ ಘಟನೆ ನಗರದ ಕೋರ್ಟ್ ರಸ್ತೆಯ ಹೀರೋ ಶೋ ರೂಮ್ ಮುಂಭಾಗ ನಡೆದಿದೆ.
ಮೊಟ್ಟೆ ಸರಬರಾಜು ವ್ಯವಹಾರ ಮಾಡುವ ರಮೇಶ್ ಅವರು ಇಂದು ಮಧ್ಯಾಹ್ನ ನಾಲ್ಕು ಲಕ್ಷ ರೂ. ಹಣವನ್ನು ಕರ್ನಾಟಕ ಬ್ಯಾಂಕ್ನಿಂದ ಡ್ರಾ ಮಾಡಿಕೊಂಡು ತಮ್ಮ ಸ್ಕೂಟರ್ ಡಿಕ್ಕಿಯಲ್ಲಿ ಇಟ್ಟಿದ್ದರು. ಬಳಿಕ ಕೋರ್ಟ್ ರಸ್ತೆಯ ಹೀರೋ ಶೋ ರೂಮ್ ಮುಂಭಾಗದಲ್ಲಿರುವ ಗ್ಯಾರೇಜ್ ಮುಂದೆ ಬೈಕ್ ನಿಲ್ಲಿಸಿ ಸ್ನೇಹಿತರೊಂದಿಗೆ ಟೀ ಕುಡಿಯಲು ಹೋಗಿದ್ದರು.
ಇದೇ ಸಮಯಕ್ಕೆ ಹೊಂಚು ಹಾಕಿ ಕುಳಿತಿದ್ದ ಖದೀಮರು, ಯಾರಿಗೂ ಅನುಮಾನ ಬಾರದಂತೆ ಸ್ಕೂಟರ್ ಸುತ್ತುವರೆದು ಬೈಕ್ ಸೀಟ್ ಬಲವಾಗಿ ಮೇಲೆತ್ತಿ ಡಿಕ್ಕಿಯಲ್ಲಿದ್ದ ಹಣ ತೆಗೆದುಕೊಂಡು ಪರಾರಿಯಾಗಿದ್ದಾರೆ. ಹಾಡುಹಗಲೇ ನಡೆದ ಘಟನೆಯಿಂದ ಸ್ಥಳೀಯರು ಆತಂಕಗೊಂಡಿದ್ದಾರೆ. ಖದೀಮರನ್ನು ಹಿಡಿಯಲು ಕೆಲವರು ಮುಂದಾದರೂ ಬೈಕ್ ಹತ್ತಿ ಪರಾರಿಯಾಗಿದ್ದಾರೆ.
ಆರೋಪಿಗಳು ರಮೇಶ್ರವರ ಚಲನವಲನಗಳನ್ನ ಗಮನಿಸಿ ಬ್ಯಾಂಕ್ನಲ್ಲಿ ಹಣ ಡ್ರಾ ಮಾಡಿಕೊಳ್ಳುವುದನ್ನು ನೋಡಿ ಹಿಂಬಾಲಿಸಿ ಈ ಕೃತ್ಯ ಎಸಗಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ರಂಗಪ್ಪ, ನಗರ ಠಾಣೆ ಸಬ್ ಇನ್ಸ್‌ಪೆಕ್ಟರ್ ಗೋವಿಂದ್ ಭೇಟಿ ನೀಡಿ ಪರಿಶೀಲಿಸಿದರು. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.