ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯ ಮತ ಎಣಿಕಾ ಕೇಂದ್ರದ ಸುತ್ತ-ಮುತ್ತ 144 ಸೆಕ್ಷನ್ ಜಾರಿ ಮಾಡಿ ಹಾಗೂ ಮದ್ಯ ಮಾರಾಟ ನಿಷೇಧಿಸಿ ಆದೇಶಿಸಲಾಗಿದೆ. ನಗರದ ಅರಮನೆ ರಸ್ತೆಯಲ್ಲಿರುವ ಮಹಾರಾಣಿ ಕಾಲೇಜಿನಲ್ಲಿ ಇಂದು ವಿಧಾನಪರಿಷತ್ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯಲಿದ್ದು, ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ನಗರದ ಮಹಾರಾಣಿ ಕಾಲೇಜಿನ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್(ನಿಷೇಧಾಜ್ಞೆ) ಜಾರಿಗೊಳಿಸಿ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್ ಆದೇಶಿಸಿದ್ದಾರೆ. ಇಂದು ಬೆಳಗ್ಗೆ 6 ಗಂಟೆಯಿಂದ ಬುಧವಾರ ಬೆಳಗ್ಗೆ 6 ಗಂಟೆಯವರೆಗೂ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಘೋಷಣೆ ಕೂಗುವುದು, ಮೆರವಣಿಗೆ ಮತ್ತು ಸಭೆಗಳನ್ನು ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಇದನ್ನೂ ಓದಿರಿ: ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ: ಅಜ್ಜಿ ಆಶೀರ್ವಾದ ಪಡೆದ ಮಯಾಂಕ್
ಮದ್ಯ ಮಾರಾಟ ನಿಷೇಧ: ವಿಧಾನಪರಿಷತ್ ಚುನಾವಣೆಯ ಮತ ಎಣಿಕಾ ಕೇಂದ್ರವಾದ ಮಹಾರಾಣಿ ಕಾಲೇಜಿನ (ಹೈಗ್ರೌಂಡ್ಸ್ ಠಾಣೆ) ಸುತ್ತ ಮುತ್ತ ಮದ್ಯ ಮಾರಾಟ ನಿಷೇಧಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ. ಇಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಹೈ ಗ್ರೌಂಡ್ಸ್ ಠಾಣೆಯ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಮಾಡುವುದನ್ನು ನಿಷೇಧಿಸಿ ಆದೇಶಿಸಲಾಗಿದೆ.