ಬೆಂಗಳೂರು : ವಿಧಾನ ಪರಿಷತ್ತಿನ ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣಾ ಫಲಿತಾಂಶವನ್ನು ನ್ಯಾಯಾಲಯದ ಅನುಮತಿ ಇಲ್ಲದೆ ಪ್ರಕಟಿಸಬಾರದು ಎಂದು ಹೈಕೋರ್ಟ್ ಏಕಸದಸ್ಯ ಪೀಠ ಹೊರಡಿಸಿರುವ ಆದೇಶದ ವಿರುದ್ಧ ಚುನಾವಣಾ ಆಯೋಗ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದೆ.
ನ್ಯಾಯಾಲಯದ ಅನುಮತಿ ಇಲ್ಲದೆ ಚುನಾವಣಾ ಫಲಿತಾಂಶ ಪ್ರಕಟಿಸಬಾರದು ಎಂದು ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಗುರುವಾರ (ಡಿ.9) ಮಧ್ಯಂತರ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಇದೀಗ ಕೇಂದ್ರ ಚುನಾವಣಾ ಆಯೋಗ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದೆ.
ಇಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಕಲಾಪ ಆರಂಭಿಸುತ್ತಿದ್ದಂತೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಅವರು ಚುನಾವಣಾ ಆಯೋಗದ ಪರ ಹಾಜರಾಗಿ, ತುರ್ತು ಇರುವುದರಿಂದ ಮೇಲ್ಮನವಿಯನ್ನು ಇಂದೇ ವಿಚಾರಣೆಗೆ ಪರಿಗಣಿಸುವಂತೆ ಕೋರಿದರು.
ಅಲ್ಲದೇ, ವಿಧಾನ ಪರಿಷತ್ತಿನ ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ನಾಮನಿರ್ದೇಶಿತ ಸದಸ್ಯರ ಮತದಾನದ ಹಕ್ಕಿನ ವಿಚಾರವಾಗಿ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯಲ್ಲಿ ನಾಮನಿರ್ದೇಶಿತ ಸದಸ್ಯರ ಮತದಾನದಕ್ಕೆ ಏಕಸದಸ್ಯ ಪೀಠ ಅವಕಾಶ ಮಾಡಿಕೊಟ್ಟಿದೆ. ಆದರೆ, ಕೋರ್ಟ್ ಅನುಮತಿ ಇಲ್ಲದೆ ಫಲಿತಾಂಶ ಪ್ರಕಟಿಸಬಾರದು ಎಂದು ಹೇಳಿದೆ.
ಮತದಾನಕ್ಕೆ ಒಂದು ದಿನ ಬಾಕಿ ಇರುವಾಗ ಕೊನೆ ಕ್ಷಣದಲ್ಲಿ ಈ ತೀರ್ಪು ನೀಡಲಾಗಿದೆ. ಉಳಿದ 19 ಕ್ಷೇತ್ರಗಳ ಫಲಿತಾಂಶದ ವಿಚಾರದಲ್ಲೂ ಇದೇ ಆದೇಶ ಪಾಲಿಸುವಂತೆ ಕೆಲ ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿವೆ. ಈ ರೀತಿ ಆದರೆ, ನಿಗದಿತ ಚುನಾವಣಾ ವೇಳಾಪಟ್ಟಿಯಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ. ಡಿ.14ರಂದು ಮತ ಎಣಿಕೆ ನಡೆಯಲಿದ್ದು, ಅದೇ ದಿನ ಫಲಿತಾಂಶ ಪ್ರಕಟಿಸಬೇಕಾಗಿದೆ ಎಂದು ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಏಕಸದಸ್ಯ ಪೀಠದ ಆದೇಶದಿಂದ ಚುನಾವಣೆಗೆ ಅಡ್ಡಿಯಾಗಿಲ್ಲ. ನಿಗದಿಯಂತೆ ಚುನಾವಣೆ ನಡೆದಿದೆ. ಮತ ಎಣಿಕೆ ಡಿ.14ರಂದು ನಡೆಯಲಿದೆ. ಇನ್ನೂ ಸಮಯ ಇದೆ ಎಂದು ಅಭಿಪ್ರಾಯಪಟ್ಟ ಸಿಜೆ ನೇತೃತ್ವದ ವಿಭಾಗೀಯ ಪೀಠ ಮೇಲ್ಮನವಿಯನ್ನು ಡಿ.13ರಂದು ವಿಚಾರಣೆ ನಡೆಸುವುದಾಗಿ ತಿಳಿಸಿ, ವಿಚಾರಣೆ ಮುಂದೂಡಿತು.
(ಇದನ್ನೂ ಓದಿ: ಪಂಚಭೂತಗಳಲ್ಲಿ ಲೀನರಾದ ವೀರಪುತ್ರ ರಾವತ್: ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ, ಪುತ್ರಿಯರಿಂದ ಅಂತಿಮ ವಿಧಿವಿಧಾನ)