ಬೆಂಗಳೂರು: ನಮ್ಮ ಮೇಲೆ ಇದ್ದ ಭಾರವನ್ನ ಸೋನಿಯಾ ಗಾಂಧಿ ಕಡಿಮೆ ಮಾಡಿದ್ದಾರೆ. ಈಗ ನಿರ್ಧಾರ ತೆಗೆದುಕೊಳ್ಳಲು ನಾವು ಸ್ವತಂತ್ರವಾಗಿದ್ದೇವೆ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಕೇಂದ್ರದ ಮಾಜಿ ಸಚಿವ ಸಿಎಂ ಇಬ್ರಾಹಿಂ ತಿಳಿಸಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಮಕರ ಸಂಕ್ರಾತಿಯ ಶುಭಾಶಯವಮ್ನ ಎಐಸಿಸಿ ಕೊಟ್ಟಿರೋದನ್ನ ನೋಡಿ ಮನಸ್ಸಿಗೆ ತುಂಬಾ ಸಂತೋಷ ಆಯ್ತು. ಸಿದ್ದರಾಮಯ್ಯ- ಶಿವಕುಮಾರ್ ಟೀಮ್ ಒಟ್ಟಿಗೆ ಕೆಲಸ ಮಾಡಲು ಇದು ಸಹಾಯ ಆಗುತ್ತೆ. ಕಾಂಗ್ರೆಸ್ ಹಾಗೂ ನಮ್ಮ ಸಂಬಂಧ ಮುಗಿದ ಅಧ್ಯಾಯ. ಹಿತೈಷಿಗಳನ್ನ ಕರೆದು ಮಾತನಾಡಿಸಿ ಶೀಘ್ರದಲ್ಲೇ ರಾಜೀನಾಮೆ ನಿರ್ಧಾರ ಕೈಗೊಳ್ತೀವಿ ಎಂದರು.
ಸಿದ್ದರಾಮಯ್ಯ ಅವರಿಂದಲೇ ನಾನು ಕಾಂಗ್ರೆಸ್ಗೆ ಬಂದೆ. ಸಿದ್ದರಾಮಯ್ಯ ಸಲುವಾಗಿ ದೇವೇಗೌಡರಂತಹ ನಾಯಕರನ್ನ ಬಿಟ್ಟೆ. ಜೈಲಲಿದ್ದು ಕಟ್ಟಿದ ಜನತಾದಳ ಪಕ್ಷವನ್ನು ಈ ಮನುಷ್ಯನ ಸಲುವಾಗಿ ತೊರೆದೆ. ಆದರೆ, ಇವರೇ ನಮಗೆ ಕೈಕೊಟ್ಟರು ಎಂದು ಬೇಸರ ವ್ಯಕ್ತಪಡಿಸಿದರು.
ಬೇರೆ ಪಕ್ಷ ಸೇರ್ಪಡೆ ಬಗ್ಗೆ ಚಿಂತನೆ: 1996 ರಲ್ಲಿ ರಾಜ್ಯಸಭಾ ಟಿಕೆಟ್ ಘೋಷಿಸಿ ರದ್ದು ಮಾಡಿದರು. ಆಗ ನಾನು ಕಾಂಗ್ರೆಸ್ ಬಿಟ್ಟೆ. ಈಗ ಮತ್ತೆ 20 ವರ್ಷದ ಬಳಿಕ ಪಕ್ಷ ಇದೇ ರೀತಿ ಮಾಡಿದೆ. ಕಾಂಗ್ರೆಸ್ಗೆ ಜನರೇ ಉತ್ತರ ನೀಡುತ್ತಾರೆ ಎಂದರು. ಮುಂದೆ ರಾಜಕೀಯದಲ್ಲಿ ಜೆಡಿಎಸ್ ಸೇರೋದಾ, ಟಿಎಂಸಿ, ಅಥವಾ ಬೇರೆ ಪಕ್ಷ ಸೇರುವುದೇ ಎಂಬ ಬಗ್ಗೆ ಶೀಘ್ರವೇ ನಿರ್ಧಾರ ಮಾಡಲಾಗುವುದು. ಕುಮಾರಸ್ವಾಮಿ ನಮ್ಮ ಸ್ನೇಹಿತರು ಅವರ ಜೊತೆಯೂ ಮಾತನಾಡುತ್ತೇನೆ ಎಂದರು.
ಇದನ್ನೂ ಓದಿ: ಬಿಜೆಪಿ ಎನ್ನುವ ವೈರಸ್ಗೆ ಕಾಂಗ್ರೆಸ್ ವ್ಯಾಕ್ಸಿನ್: ಪ್ರಿಯಾಂಕ್ ಖರ್ಗೆ ವ್ಯಂಗ್ಯ
ತಮಗೆ ಪಕ್ಷದಲ್ಲಿ ಸ್ಥಾನ ತಪ್ಪಿಸಿದ್ದು ಸಿದ್ದರಾಮಯ್ಯ ಅವರೇ ಎಂಬ ಪ್ರಶ್ನೆಗೆ, ಅದಕ್ಕೆ ಸಿದ್ದರಾಮಯ್ಯ ಅವರೇ ಉತ್ತರಿಸಬೇಕು. ಶಿವಕುಮಾರ್ ಹಾಗೂ ನಮ್ಮ ಮಧ್ಯೆ ನಮಗೆ ಹೊಂದಾಣಿಕೆ ಬೇರೆಯಾಗಿದೆ. ಅವರು ಬೆಳೆದ ಪರಿಸರ ಬೇರೆ. ವಿಚಾರ ಬೇರೆ.
ಇದರ ಪರಿಣಾಮ ಯುಪಿಲಿ ಗೊತ್ತಾಗುತ್ತೆ. ಯುಪಿಗೆ ಬನ್ನಿ ಅಂತಾ ಕರಿತಾ ಇದಾರೆ. ನಾನೇನು ದೊಡ್ಡ ನಾಯಕ ಅಲ್ಲ. ಟಿಕಾಯಿತ್ ಜೊತೆ ಕೆಲಸ ಮಾಡಿದ್ದೇನೆ. ಮುಲಾಯಂ ಸಿಂಗ್ ಯಾದವ್ ಜೊತೆ ಕೆಲಸ ಮಾಡಿದ್ದಿನಿ. ನೋಡೋಣ, ಮುಂದೆ ಏನಾಗುತ್ತೆ ಎಂದರು.
ಎಂಎಲ್ಸಿಗೆ ರಾಜೀನಾಮೆ ನೀಡುತ್ತೇನೆ: ಬಾದಾಮಿಯಲ್ಲಿ ಸಿದ್ದರಾಮಯ್ಯ ನಾಮಿನೇಷನ್ ಮಾಡಿದಾಗ ಜೊತೆಗಿದ್ದ ಫೋಟೋ ತೋರಿಸಿದ ಇಬ್ರಾಹಿಂ, ಚಾಮುಂಡೇಶ್ವರಿಯಲ್ಲಿ ಸೋಲ್ತಿರಿ ಅಂತಾ ನಾನೇ ಹೇಳಿ ಬಾದಾಮಿಯಲ್ಲಿ ನಾಮಿನೇಷನ್ ಮಾಡಿಸಿದೆ. ಈಗ ಸಿದ್ದರಾಮಯ್ಯ ನನಗೆ ಬಹುಮಾನ ಕೊಟ್ಟಿದ್ದಾರೆ ಸಂತೋಷ. ಮತ್ತೆ ಜೋಳಿಗೆ ಹಾಕಿಕೊಂಡು ರಾಜ್ಯದ ಜನರ ಮುಂದೆ ಹೋಗ್ತೇನೆ ಎಂದರು.
ಯುಪಿ ಚುನಾವಣೆ ಬಳಿಕ ರಾಜ್ಯದಲ್ಲಿ ಚುನಾವಣೆ ಆಗಬಹುದು ಅಥವಾ ರಾಷ್ಟ್ರಪತಿ ಆಡಳಿತ ಬರಬಹುದು. ಆರೋಗ್ಯ ಚೆನ್ನಾಗಿದೆ. ಕೋವಿಡ್ ಕಡಿಮೆ ಆಗ್ತಾ ಇದೆ. ರಾಜಕೀಯ ಸೋಂಕು ಬಂದಿದೆ. ನನ್ನ ಬಳಿ ಹಣ ಇಲ್ಲ. ಆದರೆ, ಜನ ಇದಾರೆ. ಜನ ತೀರ್ಮಾನ ಮಾಡ್ತಾರೆ. ನಮ್ಮ ಬೆಳೆ ಕೊಯ್ದುಕೊಂಡು ನಮ್ಮನ್ನ ಹೊರಹಾಕಿದ್ದಾರೆ. ಬೇಗ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ ಎಂದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ