ಬೆಂಗಳೂರು: ವಿಧಾನಪರಿಷತ್ ಉಪಚುನಾವಣೆಗೆ ಬಿಜೆಪಿ ಹೈಕಮಾಂಡ್ ಕೊನೆಗೂ ಇಂದು ಅಭ್ಯರ್ಥಿ ಆಯ್ಕೆ ಮಾಡಿದೆ. ಪಕ್ಷದ ಹಿರಿಯ ನಾಯಕ ಬಾಬುರಾವ್ ಚಿಂಚನಸೂರ್ಗೆ ಟಿಕೆಟ್ ಘೋಷಿಸಿ, ಯಾರಿಗೆ ಟಿಕೆಟ್ ಎಂಬ ಕುತೂಹಲಕ್ಕೆ ಬಿಜೆಪಿ ತೆರೆ ಎಳೆದಿದೆ. ಸಿ.ಎಂ. ಇಬ್ರಾಹಿಂ ರಾಜೀನಾಮೆಯಿಂದ ತೆರವಾಗಿದ್ದ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಆಗಸ್ಟ್ 11ರಂದು ಉಪಚುನಾವಣೆ ನಡೆಯಲಿದೆ.
ಬಾಬುರಾವ್ ಚಿಂಚನಸೂರ್ ಹಾಲಿ ನಿಜ ಶರಣ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷರಾಗಿದ್ದಾರೆ. ಚಿಂಚನಸೂರ್, ಯಾದಗಿರಿ ಜಿಲ್ಲೆಯ ಗುರುಮಠಕಲ್ ಕ್ಷೇತ್ರದಿಂದ ವಿಧಾನಸಭೆಗೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಚಿಂಚನಸೂರ್ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಗುರುಮಠಕಲ್ನಲ್ಲಿ ಸತತ ಎರಡು ಬಾರಿ ಗೆಲುವು ಸಾಧಿಸಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ಬಿಜೆಪಿ ಸೇರಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಬಾಬುರಾವ್ ಚಿಂಚನಸೂರ್ ಪ್ರಮುಖ ಕಾರಣಕರ್ತರಾಗಿದ್ದರು.
ಆಗಸ್ಟ್ 11ಕ್ಕೆ ಉಪಚುನಾವಣೆ ನಡೆಯಲಿದ್ದು, ಅಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಅದೇ ದಿನ ಸಂಜೆ ಮತ ಎಣಿಕೆ ಕಾರ್ಯ ನಡೆಯಲಿದೆ. ಆಗಸ್ಟ್ 1 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಆಗಸ್ಟ್ 2ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಆಗಸ್ಟ್ 4ಕ್ಕೆ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ.
ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಸಿ.ಎಂ. ಇಬ್ರಾಹಿಂ ಮಾರ್ಚ್ 31ಕ್ಕೆ ತಮ್ಮ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪರಿಷತ್ ಸ್ಥಾನದ ಅವಧಿ ಜೂನ್ 17, 2024ರ ವರೆಗೆ ಇರಲಿದೆ.
(ಇದನ್ನೂ ಓದಿ: 20 ರೂಪಾಯಿ ಕೊಟ್ಟು ಧ್ವಜ ಖರೀದಿಸಿ ಮನೆಯ ಮೇಲೆ ಹಾರಿಸಿ: ಕೇಂದ್ರ ಸಚಿವ ಜೋಶಿ)