ಯಲಹಂಕ (ಬೆಂಗಳೂರು): ರಾಜಾನುಕುಂಟೆ ಪೊಲೀಸರು ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ನಾನು ಇಂದು ವಿಚಾರಣೆಗೆ ಹಾಜರಾಗಿದ್ದೆ. ಕುಳ್ಳ ದೇವರಾಜ್ ಕೊಟ್ಟ ತಪ್ಪೊಪ್ಪಿಗೆ ಪತ್ರದ ಪ್ರತಿ ಮತ್ತು ಪೆನ್ ಡ್ರೈವ್ ಒಂದನ್ನ ನಾನು ಪೊಲೀಸರಿಗೆ ನೀಡಿದ್ದೀನಿ ಎಂದು ಯಲಹಂಕ ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಹೇಳಿದರು.
ವಿಶ್ವನಾಥ್ ಕೊಲೆಗೆ ಸಂಚು ನಡೆಸಿದ ಆರೋಪದಡಿ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಮತ್ತು ಕುಳ್ಳ ದೇವರಾಜ್ ವಿರುದ್ಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ರಾಜಾನುಕುಂಟೆ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿ ಬಳಿಕ ಮಾಧ್ಯಮದವರೊಂದಿಗೆ ವಿಶ್ವನಾಥ್ ಮಾತನಾಡಿದರು.
ಇದನ್ನೂ ಓದಿ: ಶಾಸಕ ಎಸ್.ಆರ್.ವಿಶ್ವನಾಥ್ ಕೊಲೆ ಸಂಚು: ಪ್ರಕರಣ ದಾಖಲಿಸಿಕೊಂಡ ಪೊಲೀಸರು
ಕುಳ್ಳ ದೇವರಾಜ್ ಕೊಟ್ಟ ತಪ್ಪೊಪ್ಪಿಗೆ ಪತ್ರದ ಪ್ರತಿ ಮತ್ತು ಪೆನ್ ಡ್ರೈವ್ ಅನ್ನು ಸಾಕ್ಷಿದಾರರ ಮುಂದೆ ಪೊಲೀಸರು ಅದನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ರಾತ್ರಿಯೆಲ್ಲಾ ಕುಳಿತುಕೊಂಡು ಪೆನ್ ಡ್ರೈವ್ನಲ್ಲಿದ್ದ ಸುಪಾರಿ ವಿಚಾರದ ಮಾತುಕತೆಯನ್ನ ಮಾತ್ರ ಹೈಲೆಟ್ ಮಾಡಿ ಎಡಿಟ್ ಮಾಡಿದೀವಿ. ಎಟಿಟ್ ಆಗ್ದೇ ಇರೋ ಕಾಪಿಯನ್ನ ಸಹ ಕೊಟ್ಟಿದ್ದೀನಿ. ಪಂಚನಾಮೆಗೂ ಸಹ ಸಹಿಯನ್ನ ತೆಗೆದುಕೊಂಡಿದ್ದಾರೆ. ಸರಿಯಾದ ದಿಕ್ಕಿನಲ್ಲಿ ತನಿಖೆಯಾಗಬೇಕು ಅಂತಾ ಹೇಳಿ ಒಂದಿಷ್ಟು ಮಾಹಿತಿಯನ್ನ ನೀಡಿದ್ದೀನಿ ಎಂದು ವಿಶ್ವನಾಥ್ ಹೇಳಿದರು.
ಇದನ್ನೂ ಓದಿ: ಯಲಹಂಕ: ಎಸ್.ಆರ್.ವಿಶ್ವನಾಥ್ ಬೆಂಬಲಿಗರ ಪ್ರತಿಭಟನೆ, ಟ್ರಾಫಿಕ್ ಜಾಮ್
ಶ್ರೇಯಸ್ ಹೋಟೆಲ್ನಲ್ಲಿ ಮೂರು ಜನ ಇದ್ರು ಅಂತ ಗೊತ್ತಾಯ್ತು. ಹೊರಗಡೆ ನಾಲ್ಕೈದು ಜನ ಇದ್ದಾರೆ ಅಂತ ಗೊತ್ತಾಗ್ತಿದೆ. ನಾನು ಕುಳ್ಳ ದೇವರಾಜ್ನನ್ನ ಯಾಕೆ ಭೇಟಿ ಮಾಡಲಿ. ಎಫ್ಐಆರ್ ಆದ ತಕ್ಷಣ ಬಂಧನ ಅಷ್ಟೇ ಅಲ್ಲ, ತನಿಖೆ ಆಗಬೇಕಿದೆ. ಕುಳ್ಳ ದೇವರಾಜ್ ಸುಳ್ಳು ಹೇಳೋದ್ರಲ್ಲ ನಿಸ್ಸೀಮ. ಬಹಳ ದಿನದಿಂದ ಇದೆಲ್ಲಾ ನಡೀತಿದೆ.ನಾನು ಕೂಡಾ ಅಸಡ್ಡೆ ಮಾಡಿದೆ ಅನ್ಸುತ್ತೆ. ಆಡಿಯೋ ಕೇಳಿದ ಮೇಲೆಯೇ ಗೊತ್ತಾಗಿದ್ದು. ಪೊಲೀಸರು ಕರೆದಾಗೆಲ್ಲಾ ಬರಬೇಕು ಅಂದಿದ್ದಾರೆ. ಸ್ವಲ್ಪ ಮುಂಚಿತವಾಗಿ ಕರೆದ್ರೆ ನಾನು ಬಂದು ತನಿಖೆಗೆ ಸಹಕಾರ ನೀಡುವುದಾಗಿ ತಿಳಿಸಿದ್ದೇನೆ ಎಂದರು.