ಬೆಂಗಳೂರು: ವಿಧಾನಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟನೆ ಮಾಡುವ ಮೂಲಕ ಅಶಿಸ್ತು, ಅಗೌರವ ತೋರಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ ಅವರನ್ನು ಒಂದು ವಾರ ಕಾಲ ಅಮಾನತು ಮಾಡಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದು ಆದೇಶ ಹೊರಡಿಸಿದ್ದಾರೆ.
ಶರ್ಟ್ ಬಿಚ್ಚಿ ಸದನದ ಗೌರವಕ್ಕೆ ಚ್ಯುತಿ ತಂದ ಸಂಗಮೇಶ್ ಅವರನ್ನು ಅಮಾನತು ಮಾಡುವಂತೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಅವರು ಸದನದಲ್ಲಿ ಪ್ರಸ್ತಾವನೆ ಮಂಡಿಸಿದರು.
ಪ್ರಸ್ತಾವನೆಗೆ ಆಡಳಿತ ಪಕ್ಷ ಪೂರ್ಣ ಬೆಂಬಲ ವ್ಯಕ್ತಪಡಿಸಿತು. ಈ ಹಿನ್ನೆಲೆಯಲ್ಲಿ ಸಂಗಮೇಶ್ ಅವರನ್ನು ಮಾರ್ಚ 12 ರವರೆಗೆ ಅಮಾನತು ಮಾಡಲಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸದನಕ್ಕೆ ತಿಳಿಸಿದರು.
ಸದನದಲ್ಲಿ ಅಶಿಸ್ತು, ಅಗೌರವ ಹಾಗೂ ಬೇಜವಾಬ್ದಾರಿ ವರ್ತನೆ ಸಹಿಸಲು ಸಾಧ್ಯವಿಲ್ಲ. ಹಾಗಾಗಿ ನಿಯಮ 348ರ ಅಡಿ ಸಂಗಮೇಶ್ ಅವರನ್ನು ಒಂದು ವಾರ ಕಾಲ ಸದನದಿಂದ ಅಮಾನತು ಮಾಡಲಾಗಿದೆ ಎಂದು ಸ್ಪೀಕರ್ ಪ್ರಕಟಿಸಿದರು.
ಶರ್ಟ್ ಬಿಚ್ಚಿ ಪ್ರತಿಭಟನೆ : ಇದಕ್ಕೂ ಮುನ್ನ ತಮ್ಮ ಮೇಲೆ ಭದ್ರಾವತಿಯಲ್ಲಿ ನಡೆದ ಹಲ್ಲೆ ಖಂಡಿಸಿ ಶಾಸಕ ಬಿ.ಕೆ. ಸಂಗಮೇಶ್ ಸದನದಲ್ಲಿ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದರು. ಇದು ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸ್ಪೀಕರ್ ಆಕ್ರೋಶಕ್ಕೂ ಕಾರಣವಾಯಿತು. ನೀವೇನು ರಸ್ತೆಯಿಂದ ಬಂದಿದ್ದೀರ? ನಿಮ್ಮ ಸ್ಥಾನದ ಬಗ್ಗೆ ನಿಮಗೆ ಅರಿವಿಲ್ಲವೇ? ಎಂದು ಶಾಸಕ ಸಂಗಮೇಶ್ ಅವರನ್ನು ಸ್ಪೀಕರ್ ಪ್ರಶ್ನಿಸಿದರು.
ಏನ್ರೀ ಸಿದ್ದರಾಮಯ್ಯನವರೇ? ಇವರು ವಿಧಾನಸಭಾ ಸದಸ್ಯರೇನ್ರೀ? ಏನ್ರೀ ಇವರು ಹೀಗೆ ನಡೆದುಕೊಳ್ಳುತ್ತಿದ್ದಾರೆ. ಸಂಗಮೇಶ್ ಅವರೇ ನಿಮ್ಮನ್ನು ಹೊರಗೆ ಹಾಕಬೇಕಾಗುತ್ತದೆ. ಶರ್ಟ್ ಬಿಚ್ಚಿಕೊಂಡು ಗಲಾಟೆ ಮಾಡಿದ ನೀವು ಅಶಿಸ್ತಿನಿಂದ ನಡೆದುಕೊಂಡು ಭದ್ರಾವತಿ ಜನತೆಗೆ ಅವಮಾನ ಮಾಡುತ್ತಿದ್ದೀರಿ. ನಿಮ್ಮ ಕ್ಷೇತ್ರದ ಜನರಿಗೆ ಅಗೌರವ ತೋರುತ್ತಿದ್ದೀರಿ. ಸದನದಲ್ಲಿ ಅಶಿಸ್ತಿನಿಂದ ನಡೆದುಕೊಂಡಿದ್ದೀರಿ ಎಂದು ಸ್ಪೀಕರ್ ಗರಂ ಆದರು.
ನಂತರ ಸಂಗಮೇಶ್ ಬಿಚ್ಚಿದ್ದ ಶರ್ಟ್ ಅನ್ನು ಹಾಕಿಸಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಸ್ವತಃ ಎರಡು ಗುಂಡಿಯನ್ನು ಹಾಕಿ ಅಲ್ಲಿನ ವಾತಾವರಣವನ್ನು ತಿಳಿಗೊಳಿಸಿದರು.
ಸಿಎಂ ಕಿಡಿ : ಪ್ರತಿಪಕ್ಷದವರು ಗಲಾಟೆ ಮಾಡದೆ ವಿರೋಧ ಮಾಡಬೇಕು. ಆದರೆ, ಪ್ರತಿಪಕ್ಷದವರಾಗಿ ಹೀಗೆ ನಡೆದುಕೊಳ್ಳೋದು ಸರಿಯಲ್ಲ. ನಿಮ್ಮ ನಡವಳಿಕೆ ನಿಜವಾಗಿಯೂ ನಾಚಿಕೆಗೇಡಿನ ಸಂಗತಿ. ನಿಮ್ಮ ನಡೆಯನ್ನು ರಾಜ್ಯದ ಜನರು ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ಸದನದಲ್ಲಿ ಕಿಡಿಕಾರಿದರು.