ಬೆಂಗಳೂರು: ಶಾಸಕ ಸತೀಶ್ ರೆಡ್ಡಿಯಿಂದ ಬೆಡ್ ಬ್ಲಾಕಿಂಗ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್. ಅಶೋಕ್, ಸತೀಶ್ ರೆಡ್ಡಿ ವಿರುದ್ಧದ ಆರೋಪ ಶುದ್ದ ಸುಳ್ಳು, ಸತೀಶ್ ರೆಡ್ಡಿ ಹಿಂಬಾಲಕರಾಗಲಿ, ಆಪ್ತರಾಗಲಿ ಇದರಲ್ಲಿ ಇಲ್ಲ. ತನಿಖೆಯಿಂದಲೇ ಇದು ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ಓದಿ: ಬೆಡ್ ಬ್ಲಾಕಿಂಗ್ ಪ್ರಕರಣ: ಮೂವರ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪದೇ ಪದೆ ಸತೀಶ್ ರೆಡ್ಡಿ ಹೆಸರು ಬರುವುದರಿಂದ ಅವರಿಗೂ ಬೇಸರ ಆಗಿದೆ. ಹಾಗಾಗಿ, ಅವರು ನ್ಯಾಯಾಲಯದ ಮೊರೆ ಹೋಗಿ ಮಾನನಷ್ಟ ಮೊಕದ್ದಮೆ ದಾಖಲಿಸಲಿದ್ದಾರೆ ಎಂದು ಹೇಳಿದರು. ಸತೀಶ್ ರೆಡ್ಡಿಗೆ ದೇವರು ಎಲ್ಲವನ್ನೂ ಕೊಟ್ಟಿದ್ದಾರೆ, 50-60 ಸಾವಿರಕ್ಕೆ ಶಾಸಕರೊಬ್ಬರು ಇಂಥ ಕೆಲಸ ಮಾಡುತ್ತಾರೆ ಅಂತ ಯಾರೂ ನಂಬಲು ಸಾಧ್ಯವಿಲ್ಲ ಎಂದರು.
ನಾನು ಯಾರ ಬಗ್ಗೆಯೂ ಮಾತನಾಡಿಲ್ಲ, ದೂರನ್ನೂ ಕೊಟ್ಟಿಲ್ಲ:
ಶಾಸಕ ಸತೀಶ್ ರೆಡ್ಡಿ ಮಾತನಾಡಿ, ಪಕ್ಷದ ವರಿಷ್ಠರು ಕೇಳಿದಾಗ ಮಾಹಿತಿ ಕೊಟ್ಟಿದ್ದೇನೆ. ಯಾರ ಬಗ್ಗೆಯೂ ದೂರು ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು. ನನಗೆ ಆಗದೇ ಇದ್ದವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಹೇಳಿದ್ದೇನೆ. ಯಾರಿಗೂ ಈ ಬಗ್ಗೆ ಗೊಂದಲ ಬೇಡ, ನಮ್ಮದೇ ಸರ್ಕಾರ ಇದ್ದರೂ ಲೋಪದೋಷಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದೇನೆ. ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೇನೆ ಎಂದರು.
ಪ್ರತಿಪಕ್ಷದ ಕೆಲಸ ಆಡಳಿತ ಪಕ್ಷ ಮಾಡಿದಾಗ ಕೆಲವರಿಗೆ ಸಹಿಸಲು ಸಾಧ್ಯವಾಗಿಲ್ಲ. ಬೆಡ್ ದಂಧೆ ಪ್ರಕರಣದ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಹಾಗೂ ನಾನು ಯಾರ ಕ್ಷಮೆಯನ್ನು ಕೇಳಿಲ್ಲ ಎಂದು ಸ್ಪಷ್ಟನೆ ನೀಡಿದರು. ನಾನು ಯಾವ ಸಚಿವರು ಅಥವಾ ಮುಖ್ಯಮಂತ್ರಿ ಅವರ ವಿರುದ್ಧ ಹೇಳಿಕೆ ಕೊಟ್ಟಿಲ್ಲ. ಅದು ತಪ್ಪು ಕಲ್ಪನೆ, ನಾನು ಆ ರೀತಿಯಲ್ಲಿ ಹೇಳಿಲ್ಲ. ಸಂತೋಷ್ ಜಿ ಅವರಿಗೆ ಕಂಪ್ಲೆಂಟ್ ಕೊಟ್ಟಿದ್ದೇನೆ ಅನ್ನುವುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಹೇಳಿದರು.
ನಾನು ಬೆಡ್ ಬ್ಲಾಕಿಂಗ್ ಬಗ್ಗೆ ಮಾತ್ರ ಮಾತಾಡಿದ್ದು, ಅಶೋಕ್ ಅವರು ನನಗೆ ಅಣ್ಣ ಇದ್ದ ಹಾಗೆ, ಅವರ ವಿರುದ್ಧ ನಾನು ಹೇಳಿಕೆ ನೀಡಿಲ್ಲ ಎಂದರು. ಇದಕ್ಕೂ ಮುನ್ನ ವಿಧಾನಸೌಧದಲ್ಲಿ ಸಚಿವ ಅಶೋಕ್ ಅವರಿಗಾಗಿ ಸತೀಶ್ ರೆಡ್ಡಿ ಕಾಯುತ್ತಿದ್ದರು.