ಬೆಂಗಳೂರು : ಕೇವಲ ಟಿಪ್ಪು ಸುಲ್ತಾನ್ ಮಾತ್ರ ಅಲ್ಲ. ಬ್ರಿಟಿಷರ ವಿರುದ್ಧವಾಗಿ ಹೋರಾಟ ಮಾಡಿದವರ ವಿರುದ್ಧವಾಗಿ ಇಂದು ಬಿಜೆಪಿಯವರು ನಿಂತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಆರೋಪಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಪಠ್ಯಕ್ರಮದಿಂದ ಟಿಪ್ಪು ಸುಲ್ತಾನ್ ಕೈಬಿಡುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಗಾಂಧಿ ಹತ್ಯೆ ಮಾಡಿದ ಗೋಡ್ಸೆಯನ್ನು ಬಿಜೆಪಿಯವರು ವೈಭವೀಕರಿಸುತ್ತಾರೆ.
ಟಿಪ್ಪು ವಿರುದ್ಧ ಮಾತ್ರವಲ್ಲ, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ನೆಹರು, ಗಾಂಧಿ ಸೇರಿದಂತೆ ಹೋರಾಟದಲ್ಲಿ ಭಾಗವಹಿಸಿದ್ದವರನ್ನು ವಿರೋಧಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲಾ ಪಕ್ಷಗಳಿಗೂ ಸಿದ್ದಾಂತವಿದೆ. ಬಿಜೆಪಿಗೂ ಒಂದು ಸಿದ್ದಾಂತವಿದೆ. ಕಾಂಗ್ರೆಸ್ಗೂ ಒಂದು ಸಿದ್ದಾಂತವಿದೆ.
ಯಾವ ಸಿದ್ದಾಂತವನ್ನು ಬಿಜೆಪಿಯವರು ಹೊತ್ತುಕೊಂಡು ಹೋಗ್ತಾ ಇದ್ದಾರೆ?. ಇತಿಹಾಸದ ಬಗ್ಗೆ ತಪ್ಪಾಗಿ ಮಾತನಾಡುವವರು ಯಾರು.? ಹಿಜಾಬ್, ಟಿಪ್ಪು, ಮುಸ್ಲಿಂ ಸಮುದಾಯದ ವ್ಯಾಪಾರಿಗಳಿಗ ನಿಷೇಧ ಇವುಗಳು ಬಿಜೆಪಿ ಚುನಾವಣೆಯ ತಂತ್ರಗಳಾಗಿವೆ. ಇದು ಮಾಡೋದು ತಪ್ಪು ಅಂತಾ ಬಿಜೆಪಿಯವರಿಗೆ ಗೊತ್ತು. ಆದ್ರೆ, ಏನು ಮಾಡೋದು ಅಧಿಕಾರಕ್ಕೆ ಬರಬೇಕು ಅಂತಾ ಮಾಡುತ್ತಿದ್ದಾರೆ ಎಂದು ರಿಜ್ವಾನ್ ಅರ್ಷದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತರಪ್ರದೇಶದ ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಉತ್ತರಪ್ರದೇಶ ಮಾತ್ರವಲ್ಲ, ಎಲ್ಲಾ ಕಡೆ, ಬಹಳಷ್ಟು ಕಡೆ ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಡ್ತಾರೆ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯ ದಿನಗಳಲ್ಲಿ ಪ್ರಾರ್ಥನೆ ಜೊತೆಗೆ ರಾಷ್ಟ್ರಧ್ವಜ ಹಾರಿಸ್ತಾರೆ. ಇದು ನನಗೆ ದೊಡ್ಡ ವಿಚಾರ ಅನ್ಸಲ್ಲ.
ನಾನು ಉತ್ತರಪ್ರದೇಶದ ನಾನಾ ಭಾಗಗಳಲ್ಲಿ ಹೋಗಿದ್ದೀನಿ. ಅಲ್ಲಿನ ಮದರಸಾಗಳ ಮುಖಂಡರು ಈಗ ಅಧಿಕೃತವಾಗಿ ಹೇಳಿದ್ದಾರೆ ಅಷ್ಟೇ.. ಪ್ರಾರ್ಥನೆ ಜೊತೆಗೆ ರಾಷ್ಟ್ರಗೀತೆ ಕೂಡ ಹೇಳ್ತಾರೆ. ಇದು ನಮ್ಮ ರಾಜ್ಯದ ಪ್ರತಿ ಸ್ಕೂಲ್ ಮತ್ತು ಮದರಸಾಗಳಲ್ಲಿ ನಡೆಯುತ್ತಿದೆ ಎಂದರು.
ಇದನ್ನೂ ಓದಿ: ಕ್ರಿಶ್ಚಿಯನ್ ಅಂದರೆ ಮತಾಂತರ ಮಾಡುವವರಲ್ಲ, ಪ್ರೀತಿ ಹಂಚಿ, ಶಾಂತಿ ಕಾಪಾಡುವವರು : ವಿನಿಷಾ ನೀರೋ