ಬೆಂಗಳೂರು: ನಾನು ಸೋಮವಾರ ನವದೆಹಲಿಗೆ ತೆರಳುತ್ತಿದ್ದು, ಸಚಿವರ ಕಾರ್ಯ ವೈಖರಿ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತರುತ್ತೇನೆ ಎಂದು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂಬಳಕಾಯಿ ಕಳ್ಳ ಅಂದರೆ ಯಾಕೆ ಹೆಗಲು ಮುಟ್ಟಿಕೊಂಡು ನೋಡಿಕೊಳ್ಳಬೇಕು. ಯಾವ ಸಚಿವರು ಸ್ಪಂದಿಸಿಲ್ಲವೋ ಆ ಸಚಿವರ ಬಗ್ಗೆ ಸಿಎಂ ಹಾಗೂ ಅಧ್ಯಕ್ಷರ ಗಮನಕ್ಕೆ ತಂದಿದ್ದೇನೆ. ಶಾಸಕಾಂಗ ಪಕ್ಷದ ಸಭೆಯಲ್ಲೂ ಕೆಲ ಸಚಿವರ ಬಗ್ಗೆ ಧ್ವನಿ ಎತ್ತಿದ್ದೇನೆ.
ಆದರೆ, ಇವರಿಂದ ನಾನು ನೀತಿ ಪಾಠ ಕಲಿಯುವ ಅವಶ್ಯಕತೆ ಇಲ್ಲ. ಅವರು ಒಂದು ಬಾರಿ ಮಂತ್ರಿಗಿರಿ ಬಿಟ್ಟು ಬಂದು ಮಾತಾಡಲಿ ಎಂದು 'ಕಂಬಳಿಯಲ್ಲಿ ಕಲ್ಲು ಕಟ್ಟಿ ಹೊಡೆಯುವ ಬದಲು ಯಾವ ಸಚಿವರು ಎಂದು ಹೇಳಲಿ' ಎಂದಿದ್ದ ಸಚಿವ ಬಿ.ಸಿ.ಪಾಟೀಲ್ ಹೇಳಿಕೆಗೆ ತಿರುಗೇಟು ನೀಡಿದರು.
ಸೋಮವಾರ ನಾನು ದೆಹಲಿಗೆ ಹೋಗುತ್ತಿದ್ದೇನೆ. ನಾನು ನೂರಕ್ಕೆ ನೂರರಷ್ಟು ಸಚಿವರ ಬಗ್ಗೆ ಹೇಳಿಯೇ ಹೇಳುತ್ತೇನೆ. ಸಚಿವರ ಕಾರ್ಯವೈಖರಿ ಬಗ್ಗೆ ವರಿಷ್ಠರ ಗಮನಕ್ಕೆ ತರುತ್ತೇನೆ ಎಂದು ರೇಣುಕಾಚಾರ್ಯ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಕಾವೇರಿ - ಪೆನ್ನಾರ್ ನದಿ ಜೋಡಣೆ ಕೇಂದ್ರದ ಏಕಮುಖ ನಿರ್ಧಾರ: ಸಿದ್ದರಾಮಯ್ಯ
ಈಗಾಗಲೇ ಸುದ್ದಿಗೋಷ್ಠಿ ನಡೆಸಿ ಕೆಲಸ ಮಾಡದ ಸಚಿವರನ್ನು ಕೈಬಿಟ್ಟು ಕೆಲಸ ಮಾಡುವವರಿಗೆ ಅವಕಾಶ ಕೊಡಿ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದ ರೇಣುಕಾಚಾರ್ಯ, ಕೆಲ ಸಚಿವರ ವಿರುದ್ಧ ನೇರವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಕೆಲ ಸಚಿವರ ವಿರುದ್ಧ ದೂರು ಹಿಡಿದು ದೆಹಲಿಗೆ ಹೊರಟಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಸೋಮವಾರ ದೆಹಲಿಗೆ ತೆರಳುತ್ತಿದ್ದು, ಇದೇ ವೇಳೆ ಸಚಿವರ ವಿರುದ್ಧ ದೂರು ಹೊತ್ತು ರೇಣುಕಾಚಾರ್ಯ ಕೂಡ ದೆಹಲಿಗೆ ತೆರಳುತ್ತಿರುವುದು ಕುತೂಹಲ ಮೂಡಿಸಿದೆ.