ಬೆಂಗಳೂರು: ಇವತ್ತು ದೇಶ ವ್ಯಾಪಾರಿಗಳ ಕೈಗೆ ಹೋಗಿದೆ. ವ್ಯಾಪಾರ ಅಂದರೆ ಲಾಭ. ನಾವು ಇಂದು ಅದರ ಪರಿಣಾಮ ಎದುರಿಸುತ್ತಿದ್ದೇವೆ. ಬೆಲೆ ಏರಿಕೆಯ ಅಪರಾಧಿಗಳು ನಾವು ಎಂದು ಶಾಸಕ ರಮೇಶ್ ಕುಮಾರ್ ಕಿಡಿ ಕಾರಿದರು.
'ಈಗ ಎಲ್ಕೆಜಿಗೇ ಲಕ್ಷ ಫೀಸ್ ತಗೋತಾರೆ?, ಯಾರು ಈ ಬೆಲೆ ಏರಿಕೆ ಮಾಡಿರುವುದು?'
ವಿಧಾನಸಭೆಯಲ್ಲಿ ಬೆಲೆ ಏರಿಕೆ ಮೇಲೆ ಚರ್ಚೆ ವೇಳೆ ಮಾತನಾಡಿದ ಅವರು, ನಮ್ಮ ಬೆಲೆ ಏರಿಕೆ ಆಗಿದೆ. ಸಹಜವಾಗಿ ಅಲ್ಲಿಯೂ ಬೆಲೆ ಏರಿಕೆ ಆಗಬೇಕು. ಯಾವುದರದ್ದು ಬೆಲೆ ಏರಿಕೆ ಆಗಿದೆ ಎಂದು ನಿರ್ಧಾರ ಆಗಬೇಕಲ್ಲ. ಬೆಲೆ ಏರಿಕೆಯಾಗಿದ್ದು ಪೆಟ್ರೋಲ್‌ದ್ದಾ, ಡೀಸೆಲ್ದ್ದಾ, ಟೀ ಪುಡಿಯದ್ದಾ, ಅಕ್ಕಿಯದ್ದಾ, ಬೇಳೆ ಕಾಳಿನದ್ದಾ?. ಈಗ ಆಡಳಿತ ಪಕ್ಷ, ಮಾಜಿ ಆಡಳಿತ ಪಕ್ಷ, ವಿರೋಧ ಪಕ್ಷ, ಮಾಜಿ ವಿರೋಧ ಪಕ್ಷ, ವಿರೋಧ ಪಕ್ಷ, ಮುಂಬರುವ ಆಡಳಿತ ಪಕ್ಷ, ಮುಂಬರುವ ವಿರೋಧ ಪಕ್ಷ ಅಂಥ ಆಗಿದೆ. ಆವತ್ತಿನ ಸರ್ಕಾರಿ ಶಾಲೆಯ ಶಿಕ್ಷಕರಿಗೆ ಎಷ್ಟು ಸಂಬಳ ಕೊಡುತ್ತಿದ್ದರು?, ಸರ್ಕಾರಿ ಶಾಲೆಗಳಲ್ಲಿ ಎಷ್ಟು ಶುಲ್ಕ ಎಷ್ಟು ಪಾವತಿಸುತ್ತಿದ್ದೆವು?. ಈಗ ಎಲ್ಕೆಜಿಗೇ ಲಕ್ಷ ಫೀಸ್ ತಗೋತಾರೆ?. ಯಾರು ಈ ಬೆಲೆ ಏರಿಕೆ ಮಾಡಿರುವುದು? ಎಂದು ಪ್ರಶ್ನಿಸಿದರು.
'ಸತ್ಯ ಮಾತನಾಡಲು ನಾವು ಸತ್ತಿದ್ದೇವೆ, ಬದುಕಿಲ್ಲ'
ಸದನದಲ್ಲಿನ ನಮ್ಮ ಸದಸ್ಯರಲ್ಲಿ ಎಷ್ಟು ಮಂದಿಗೆ ಬೆಲೆ ಏರಿಕೆ ಬಿಸಿ ತಟ್ಟಿರಬಹುದು? ಸತ್ಯ ಮಾತನಾಡಲು ನಾವು ಸತ್ತಿದ್ದೇವೆ, ಬದುಕಿಲ್ಲ. ಕೋವಿಡ್ ಆಸ್ಪತ್ರೆಗಳಲ್ಲಿ ಒಂದೊಂದು ದರ ವಿಧಿಸುತ್ತಿವೆ. ಹೆಣ ಕೊಡುವುದಿಲ್ಲ. ಶಾಸನದ ಭಯ ಇಲ್ಲ. ಜನ ಏನು ತಿಳಿದುಕೊಳ್ಳುತ್ತಾರೆ ಎಂಬ ಭಯ ಇಲ್ಲ. ನಾವೆಲ್ಲ ಸ್ವಂತ ಹೆಲಿಕಾಪ್ಟರ್ ಹೊಂದಿದ್ದೇವೆ. ಈ ಸದನದಲ್ಲಿ ಇರುವ ಸದಸ್ಯರಲ್ಲಿ ಆವತ್ತು ಐದಾರು ಮಂದಿಗೆ ಮಾತ್ರ ಕಾರಿತ್ತು. ಬಹುತೇಕರು ನಾವು ಬಸ್ನಲ್ಲಿ ಬರುತ್ತಿದ್ದೆವು. ನಮ್ಮ ಬೆಲೆ ಏರಿಕೆ ಎಷ್ಟಾಗಿದೆ ಎಂಬುದನ್ನು ನೋಡಬೇಕು. ನಾವು ಇಲ್ಲಿ ಬರಲು ಎಷ್ಟು ಬೆಲೆ ನೀಡಿದ್ದೇವೆ, ಬಂದ ಮೇಲೆ ಎಷ್ಟು ಬೆಲೆ ನಿಗದಿಯಾಗಿದೆ? ಎಂದು ಸೂಚ್ಯವಾಗಿ ತಿಳಿಸಿದರು.
'ಭ್ರಷ್ಟ ವ್ಯವಸ್ಥೆಗೆ ನಾವೆಲ್ಲ ಹೊಣೆ'
ಬೆಂಗಳೂರು ಅಭಿವೃದ್ಧಿಯಾಗಿದ್ದರೆ ಸ್ಲಂ ಬೋರ್ಡ್ ಏಕಿದೆ?. ಬೆಂಗಳೂರಲ್ಲಿ ಸ್ಲಂ ಇರಬೇಕು, ಸ್ಲಂ ಬೋರ್ಡ್ ಕೂಡ ಇರಬೇಕು. ಫೈ ಸ್ಟಾರ್ ಹೋಟೇಲ್ಗಳೂ ಇವೆ. ಶುದ್ಧ ಕುಡಿಯುವ ನೀರು ಕೊಡುವುದು ನಮ್ಮ ಆದ್ಯತೆ ಅಲ್ಲ. ಪೆಟ್ರೋಲ್ ಬಂಕ್ ನಮ್ಮ ಆದ್ಯತೆಯಾಗಿದೆ. ಈ ದೇಶ ಡಂಪಿಂಗ್ ಯಾರ್ಡ್ ಆಗಿದೆ. ಸಾರ್ವಜನಿಕ ಸಂಬಂಧಿತ ಕಡತಗಳು ಅಲ್ಲೇ ಮಲಗಿರುತ್ತವೆ. ಭ್ರಷ್ಟ ವ್ಯವಸ್ಥೆಗೆ ನಾವೆಲ್ಲ ಹೊಣೆಯಾಗಿದ್ದೇವೆ. ಮೈಕ್ ಒಂದೇ ಸರತಿ ಬದಲಾಯಿಸುತ್ತೇವೆ ಅಷ್ಟೇ. ಹಿಂದೆ ನಾವು ಹೇಳಿದ್ದೇವೆ. ಇಂದು ನೀವು ಹೇಳುತ್ತೀರ. ಅಂಕಿಅಂಶ ಬದಲಾಗಿರುತ್ತದೆ ಎಂದರು.
ಇದನ್ನೂ ಓದಿ: 1,801 ಪ್ರೌಢಶಾಲೆ ಸಹ ಶಿಕ್ಷಕ ಹುದ್ದೆಗಳ ಭರ್ತಿಗೆ ಕ್ರಮ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್