ಬೆಂಗಳೂರು: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಪ್ರಣಾಳಿಕೆ ಸಿದ್ಧಪಡಿಸುವ ಸಂಬಂಧ ಶಾಸಕ ಪ್ರಿಯಾಂಕ್ ಖರ್ಗೆ ಎಐಸಿಸಿ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಸದ್ಯ ದೆಹಲಿಯಲ್ಲಿರುವ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಉತ್ತರಪ್ರದೇಶ ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕಾ ಗಾಂಧಿ ಜೊತೆ ಚರ್ಚಿಸಿದ್ದಾರೆ. 2022 ರಲ್ಲಿ ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಐದು ರಾಜ್ಯಗಳಿಗೆ ಇದೇ ಸಂದರ್ಭ ಚುನಾವಣೆ ನಡೆಯಲಿದ್ದು, ಉತ್ತರಪ್ರದೇಶದ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆ ಸಿದ್ಧಪಡಿಸುವ ಜವಾಬ್ದಾರಿಯನ್ನು ಪ್ರಿಯಾಂಕ್ ಖರ್ಗೆಗೆ ವಹಿಸಲಾಗಿದೆ. ವರ್ಷಕ್ಕೆ ಮುನ್ನವೇ ಪ್ರಣಾಳಿಕೆ ಸಿದ್ಧಪಡಿಸುವ ಕಾರ್ಯದಲ್ಲಿ ನಿರತರಾಗಿರುವ ಅವರು ಈ ಸಂಬಂಧ ಪಕ್ಷದ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ಮಾಹಿತಿ ಪಡೆಯುವ ಕಾರ್ಯ ಮಾಡುತ್ತಿದ್ದಾರೆ.
Uttar Pradesh Election manifesto: ಪಕ್ಷದ ಹಿರಿಯ ನಾಯಕರ ಸಲಹೆ ಸೂಚನೆಗಳನ್ನು ಆಧರಿಸಿ ಮತ್ತು ಉತ್ತರಪ್ರದೇಶದ ಪರಿಸ್ಥಿತಿಯನ್ನು ಅರಿತು ಅಲ್ಲಿಗೆ ಅಗತ್ಯವಿರುವ ವಿಚಾರಗಳನ್ನು ಪ್ರಮುಖವಾಗಿ ಇಟ್ಟುಕೊಂಡು ಕಾಂಗ್ರೆಸ್ ಪ್ರಣಾಳಿಕೆ ಸಿದ್ಧಪಡಿಸುತ್ತಿದೆ.
Uttar Pradesh Election: ಉತ್ತರ ಪ್ರದೇಶ ಚುನಾವಣೆ ಗೆಲುವು ಕಾಂಗ್ರೆಸ್ಗೆ ಅತ್ಯಂತ ಪ್ರಮುಖವಾಗಿದೆ. ಪ್ರಿಯಾಂಕಾ ಗಾಂಧಿಗೆ ಉತ್ತರಪ್ರದೇಶದ ಉಸ್ತುವಾರಿ ವಹಿಸಲಾಗಿದೆ. ನಾಯಕತ್ವವನ್ನು ಸಾಬೀತುಪಡಿಸಿಕೊಳ್ಳಲು ಅವರಿಗೆ ಇದು ಒಂದು ಉತ್ತಮ ಅವಕಾಶವಾಗಿದೆ.
ಉತ್ತರಪ್ರದೇಶ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಆಡಳಿತ ನಡೆಸುತ್ತಿದ್ದು, ಸ್ಥಳೀಯವಾಗಿ ಹಿಂದಿನ ಜನಪ್ರಿಯತೆಯನ್ನು ಅವರು ಉಳಿಸಿಕೊಂಡಿಲ್ಲ. ರಾಜ್ಯದ ಜನ ಬದಲಾವಣೆ ಬಯಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನೊಮ್ಮೆ ಸಮಾಜವಾದಿ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರಕ್ಕೆ ಬರುವ ಪ್ರಯತ್ನ ಮಾಡದೆ ಏಕಾಂಗಿಯಾಗಿ ಹೋರಾಡಲು ಕಾಂಗ್ರೆಸ್ ತೀರ್ಮಾನಿಸಿದೆ. ಈ ಹಿನ್ನೆಲೆ ಪ್ರಿಯಾಂಕಾ ಗಾಂಧಿಗೆ ಜವಾಬ್ದಾರಿ ವಹಿಸಲಾಗಿದ್ದು, ರಾಜ್ಯದ ಚುನಾವಣೆಯನ್ನು ಅತ್ಯಂತ ಪ್ರತಿಷ್ಠೆಯಾಗಿ ಕಾಂಗ್ರೆಸ್ ಪರಿಗಣಿಸಿದೆ.
ಇದನ್ನೂ ಓದಿ: 15 ಸ್ಥಾನಗಳಲ್ಲಿ BJP ಗೆಲುವು ನಿಶ್ಚಿತ: ಮಾಜಿ ಸಿಎಂ ಬಿಎಸ್ವೈ ವಿಶ್ವಾಸ
ವಿವಿಧ ರಾಜ್ಯಗಳ ಮುಖಂಡರನ್ನು ಒಗ್ಗೂಡಿಸಿ ಉತ್ತರ ಪ್ರದೇಶ ಚುನಾವಣೆ ಎದುರಿಸಲು ಪ್ರಣಾಳಿಕೆ ಸಿದ್ಧಪಡಿಸುತ್ತಿರುವ ಕಾಂಗ್ರೆಸ್ ಹೈಕಮಾಂಡ್ ಈ ಸಂದರ್ಭದಲ್ಲಿ ಪ್ರಿಯಾಂಕ್ ಖರ್ಗೆಗೆ ವಿಶೇಷ ಸ್ಥಾನಮಾನ ನೀಡಿದೆ.
ಭರವಸೆಯ ಮಹಾಪೂರ:
ಈಗಾಗಲೇ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಜನರಿಗೆ 10 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಸೇರಿದಂತೆ ಇದಕ್ಕೂ ಮೊದಲು 7 ಭರವಸೆಗಳನ್ನು ಜನರ ಮುಂದಿಟ್ಟಿದೆ ಕಾಂಗ್ರೆಸ್. ರಾಜ್ಯದಲ್ಲಿ ಅಧಿಕಾರಕ್ಕೇರಿದರೆ ಗೋಧಿ ಮತ್ತು ಭತ್ತವನ್ನು ಕ್ವಿಂಟಾಲ್‌ಗೆ 2,500 ರೂ.ಗೆ ಹಾಗೂ ಕಬ್ಬನ್ನು ಕ್ವಿಂಟಾಲ್‌ಗೆ 400 ರೂ. ಖರೀದಿಸುವುದಾಗಿ ಕಾಂಗ್ರೆಸ್ ತಿಳಿಸಿದೆ. 20 ಲಕ್ಷ ಜನರಿಗೆ ಉದ್ಯೋಗ ನೀಡುವುದಾಗಿ ಹೇಳಿರುವ ಕಾಂಗ್ರೆಸ್, ವಿದ್ಯುತ್ ಬಿಲ್ ಅನ್ನು ಅರ್ಧಕ್ಕೆ ಇಳಿಸುವುದಾಗಿ ಹೇಳಿದೆ. ಜತೆಗೆ ಕೊರೊನಾ ಬಿಕ್ಕಟ್ಟಿನಿಂದ ಆರ್ಥಿಕ ತೊಂದರೆಗೆ ಸಿಲುಕಿರುವ ಕುಟುಂಬಗಳಿಗೆ 25,000 ರೂ. ನೀಡುವುದಾಗಿಯೂ ಪಕ್ಷ ಹೇಳಿದೆ. ಇದಲ್ಲದೇ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಶೇ.40ರಷ್ಟು ಟಿಕೆಟ್‌ಗಳನ್ನು ಮಹಿಳೆಯರಿಗೆ ನೀಡಲಾಗುವುದು. ಪಿಯುಸಿ ಪಾಸ್ ಆಗುವ ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ಫೋನ್ ಹಾಗೂ ಪದವೀಧರ ವಿದ್ಯಾರ್ಥಿನಿಯರಿಗೆ ಇ-ಸ್ಕೂಟರ್ ನೀಡುವುದಾಗಿಯೂ ಪಕ್ಷ ಭರವಸೆ ನೀಡಿದೆ.