ಬೆಂಗಳೂರು: ರಾಜಕೀಯದಲ್ಲಿ ಯಾವಾಗ ಏನೂ ಆಗುವುದೋ ಗೊತ್ತಿಲ್ಲ. ಈಗಿನ ರಾಜಕಾರಣ ಆ ಪರಿಸ್ಥಿತಿಗೆ ಬಂದು ನಿಂತಿದೆ. ಮುಂದಿನ ಚುನಾವಣೆಯಲ್ಲಿ ಎಲ್ಲವೂ ನಿರ್ಧಾರ ಆಗಲಿದೆ ಎಂದು ಜೆಡಿಎಸ್ ತಟಸ್ಥ ಶಾಸಕ ಜಿ.ಟಿ.ದೇವೇಗೌಡ ಮಾರ್ಮಿಕವಾಗಿ ನುಡಿದಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಆರೇ ತಿಂಗಳಲ್ಲಿ ಕ್ಷೇತ್ರ ಬದಲಾವಣೆ ಮಾಡಿದರು. ಕ್ಷಿಪ್ರ ರಾಜಕೀಯ ಬೆಳವಣಿಗೆ ಆದವು. ಹೆಚ್.ಡಿ. ಕುಮಾರಸ್ವಾಮಿ ಸಿಎಂ ಆಗುತ್ತಾರೆ ಎಂದು ಯಾರೂ ಕಂಡಿರಲಿಲ್ಲ.
ಹೆಚ್ಚಿನ ಸ್ಥಾನ ಗಳಿಸಿದ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಅಂದುಕೊಂಡಿದ್ದೆವು. ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದ ಆಗಲಿಲ್ಲ. ನಂತರ ಕ್ಷಿಪ್ರ ರಾಜಕೀಯ ಬೆಳವಣಿಗೆಯಿಂದ ಬಿ.ಎಸ್.ಯಡಿಯೂರಪ್ಪ ಹದಿನೈದೇ ದಿನದಲ್ಲಿ ಸಿಎಂ ಆದರು. ಹಾಗಾಗಿ, ಯಾವಾಗ ಏನೂ ಆಗುತ್ತದೆ ಎಂದು ಭವಿಷ್ಯ ಹೇಳಲಾಗದು ಎಂದರು.
ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ಇನ್ನೂ ಎರಡು ವರ್ಷ ಬಾಕಿಯಿದೆ. ಇಡೀ ದೇಶ ಕೊರೊನಾದಿಂದ ತತ್ತರಿಸುತ್ತಿದೆ. ಹಳ್ಳಿಯಿಂದ ದೆಹಲಿವರೆಗೆ ಕೊರೊನಾ ಇದೆ. ಇದರ ಬಗ್ಗೆ ನಾವೆಲ್ಲರೂ ಗಮನಹರಿಸಿದ್ದೇವೆ. ಚುನಾವಣೆ ಇನ್ನೂ 23 ತಿಂಗಳು ಇದೆ ಎಂದರು.
ಕೊರೊನಾ ಸೋಂಕಿನಿಂದಾಗಿ ರಾಜ್ಯದ ಅಭಿವೃದ್ಧಿ ನಿಂತು ಹೋಗಿದೆ. ಅನುದಾನನೂ ಇಲ್ಲ, ಏನೂ ಇಲ್ಲ. ರಾಜಕಾರಣಿಗಳು ಬಹಳ ಕಷ್ಟದಲ್ಲಿದ್ದೇವೆ. ಶಿಕ್ಷಣದ ಗತಿ ಅದೋಗತಿಯತ್ತ ಹೋಗುತ್ತಿದೆ. ಆರೋಗ್ಯವೂ ಅಯೋಮಯವಾಗ್ತಿದೆ. ಹೀಗಾಗಿ, ನಾನು ಶಾಸಕನಾಗಿ ಕೆಲಸ ಮಾಡ್ತಿದ್ದೇನೆ ಎಂದರು.
ದೇವೇಗೌಡರ ಬಳಿ ಮಾತುಕತೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ದೇವೇಗೌಡರು ಪ್ರಧಾನಿಯಾಗಿ 25 ವರ್ಷ ಪೂರ್ಣಗೊಂಡಿದ್ದರಿಂದ ಅವರು ನೀಡಿದ ಕೊಡುಗೆ ಬಗ್ಗೆ ಮಾತನಾಡಿದ್ದೆ ಅಷ್ಟೇ. ಜೆಡಿಎಸ್ ಎಂಎಲ್ಎ ಅಂತಾನೂ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ: ಕೊರೊನಾ ಸಂತ್ರಸ್ತರಿಗೆ ಪರಿಹಾರ: 6 ವಾರಗಳಲ್ಲಿ ಮಾರ್ಗಸೂಚಿ ರೂಪಿಸಲು ಕೇಂದ್ರಕ್ಕೆ ಸುಪ್ರೀಂ ನಿರ್ದೇಶನ