ಬೆಂಗಳೂರು : ಕೆಲಸಕ್ಕೆ ಬಾರದ ಯೋಜನೆಗಳಿಗೆ ಹಣ ಕೊಡುತ್ತೀರಾ. ದೊಡ್ಡವರೆಲ್ಲಾ ಸಾವಿರಾರು ಕೋಟಿ ಲೂಟಿ ಮಾಡ್ಕೊಂಡು ಹೋದರು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು. ವಿಧಾನಸಭೆಯಲ್ಲಿ ಬೇಡಿಕೆ ಮೇಲಿನ ಚರ್ಚೆಯಲ್ಲಿ 'ಕೃಷ್ಣಾ ಮೇಲ್ದಂಡೆ ಯೋಜನೆ' ವಿಚಾರವಾಗಿ ಮಾತನಾಡುತ್ತಾ, ರಾಜ್ಯದ ಶೇ.69ರಷ್ಟು ನೀರಾವರಿ ವ್ಯಾಪ್ತಿ ಹೊಂದಿರುವ ನದಿ ಕೃಷ್ಣಾ. ಈವರೆಗೂ ಬಂದಿರುವ ಸರ್ಕಾರಗಳು ಈ ಬಗ್ಗೆ ಚರ್ಚೆ ಮಾಡುತ್ತವೆ.
ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಇದಕ್ಕೆ ಶಿಲಾನ್ಯಾಸ ಮಾಡಿದರು. ಆದರೆ, ಇವತ್ತಿನವರೆಗೆ ಯೋಜನೆ ಆಗಿಲ್ಲ. ವಿಜಯಪುರ ಜಿಲ್ಲೆಯಲ್ಲಿ ರೈತರು ಜಮೀನು ತ್ಯಾಗ ಮಾಡಿದರು. ಯಾವ ಸರ್ಕಾರ ಕೂಡ ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಸ್ಪಂದಿಸಿಲ್ಲ. ತುಮಕೂರಿನವರೆಗೂ ನೀರು ಸಿಗುವ ಯೋಜನೆ ಇದು. ಕೃಷ್ಣಾ ಅಂದರೆ ಮಂತ್ರಿಗಳಿಗೆ, ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಬಂಗಾರದ ಕಣಜ ಆಗಿದೆ.
ದುಡ್ಡು ಹೊಡೆಯುವ ಕೆಲಸ ಬಿಟ್ಟರೆ ಯೋಜನೆ ಆಗುತ್ತಿಲ್ಲ. ಗೋವಿಂದ ಕಾರಜೋಳ ಸಚಿವರಿದ್ದಾರೆ. ನೋಡೋಣ ಯೋಜನೆ ಆಗಬಹುದು. ಬಜೆಟ್ ನೋಡಿದರೆ ಬಹಳ ನೋವಾಗುತ್ತದೆ. ಹಿಂದಿನ ಬಜೆಟ್ನಲ್ಲಿಯೂ ಕೃಷ್ಣಾಗೆ ಹಣವನ್ನು ಇಟ್ಟಿರಲಿಲ್ಲ. ಬಿಎಸ್‌ವೈ ಮನವೊಲಿಸಿದರೂ ಆಗಲಿಲ್ಲ ಎಂದು ಟೀಕಿಸಿದರು.
ಹೆಚ್.ಕೆ.ಪಾಟೀಲ್ ಕೃಷ್ಣಾ ಬಗ್ಗೆ ಪುಸ್ತಕ ಬರೆದರು. ಅವರೇ ನೀರಾವರಿ ಸಚಿವರಾದರೂ, ನ್ಯಾಯ ಸಿಗಲಿಲ್ಲ. 'ಕೇಳಲಿ ನಿಮಗೆ ಕೃಷ್ಣೆಯ ಕೂಗು' ಎಂದು ಕಾಂಗ್ರೆಸ್ನವರು ಹೋರಾಟ ಮಾಡಿದರು. ಆಗ ಅಧಿಕಾರಕ್ಕೆ ಬಂದರೆ ಹತ್ತು ಸಾವಿರ ಕೋಟಿ ಪ್ರತಿವರ್ಷ ಕೊಡ್ತೀವಿ ಎಂದು ಹೇಳಿದರೂ, ಕೊಡಲಿಲ್ಲ. ಎಷ್ಟು ಶತಮಾನಗಳ ನಂತರ ಈ ಯೋಜನೆ ಮುಗಿಯುತ್ತದೆ?. ಇದಕ್ಕೆ ವಿಶೇಷ ಪ್ಯಾಕೇಜ್ ಮಾಡಿ. ಐದು ಸಾವಿರ ಕೋಟಿ ಈ ಬಜೆಟ್ನಲ್ಲಿ ಕೊಟ್ಟಿದ್ದೀರಾ?. ಬರುವ ಬಜೆಟ್ನಲ್ಲಿ 15 ಸಾವಿರ ಕೋಟಿ ಮೀಸಲಿಡಿ ಎಂದು ಯತ್ನಾಳ್ ಆಗ್ರಹಿಸಿದರು.
ಇದನ್ನೂ ಓದಿ: ಜೂನ್ನಲ್ಲಿ 'ಜಲಸಂಗ್ರಹಾರ ಕೆರೆ' ಕಾಮಗಾರಿ ಪೂರ್ಣ: ಸಚಿವ ಬಿ.ಎ.ಬಸವರಾಜ್