ಬೆಂಗಳೂರು: ರಾಜ್ಯ ಸರ್ಕಾರದಿಂದ ಮರಾಠ ಅಭಿವೃದ್ಧಿ ನಿಗಮ ಘೋಷಣೆ ವಿರೋಧಿಸಿ ನಗರದ ವಿವಿಧೆಡೆ ಪ್ರತಿಭಟನೆ ನಡೆಸುತ್ತಿದ್ದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೆಆರ್ ಪುರ ಬಿಬಿಎಂಪಿ ಕಚೇರಿ ಮುಂಭಾಗದಲ್ಲಿ ನೂರಾರು ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸಿ ನಗರದ ಟೌನ್ ಹಾಲ್ ಬಳಿ ಪ್ರತಿಭಟನೆ ಮಾಡಲು ಕಾಲ್ನಡಿಗೆಯಲ್ಲಿ ಜಾಥಾ ಹೋಗಲು ಯತ್ನಿಸಿದಾಗ ಅವರನ್ನು ತಡೆದು ಬಿಎಂಟಿಸಿ ಬಸ್ನಲ್ಲಿ ಬಂಧಿಸಿ ಮಹದೇವಪುರ ಠಾಣೆಗೆ ಒಪ್ಪಿಸಲಾಯಿತು.
ಬೆಂಗಳೂರು ನಗರದ ಹೊರವಲಯದಿಂದ ಬರುವ ಸಂಘಟನೆಗಳನ್ನು ತಡೆಯಲು ಕೆಆರ್ ಪುರ ಮತ್ತು ಟಿನ್ ಫ್ಯಾಕ್ಟರಿ ಬಳಿ ನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಕರುನಾಡ ರೈತ ಸಂಘ, ಸುವರ್ಣ ಕರ್ನಾಟಕ ಸಂಘಟನೆಗಳ ಒಕ್ಕೂಟದ ಹೋರಾಟಗಾರರನ್ನು ಕೆಆರ್ ಪುರ ಪೊಲೀಸರು ಬಂಧಿಸಿದರು. ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ರಸ್ತೆ ತಡೆ ನಡೆಸಿ ರಾಜ್ಯ ಸರ್ಕಾರ ಮತ್ತು ಸಿಎಂ ಯಡಿಯೂರಪ್ಪನವರ ವಿರುದ್ಧ ಧಿಕ್ಕಾರ ಕೂಗಿದರು. ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಯ ಕ್ರಮ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು 50ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.
ಇನ್ನು ಟೌನ್ ಹಾಲ್ ಮುಂಭಾಗ ಕನ್ನಡಪರ ಹೋರಾಟಗಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಸಿಎಂ ಯಡಿಯೂರಪ್ಪ ವಿರುದ್ಧ ಧಿಕ್ಕಾರ ಕೂಗಿದರು. ಘೋಷಣೆ ಕೂಗುತ್ತಿದ್ದಂತೆ ನೂರಾರು ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು.
ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್ವರೆಗೂ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಆದ್ರೆ ರ್ಯಾಲಿಗೆ ಪೊಲೀಸರು ಅನುಮತಿ ಕೊಡದ ಕಾರಣ ಟೌನ್ ಹಾಲ್‌ನಲ್ಲೇ ಪ್ರತಿಭಟನೆ ಮಾಡಿದ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದರು.
ಇನ್ನು ಗಾಂಧಿನಗರದಲ್ಲಿ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ನೇತೃತ್ವದಲ್ಲಿ ಗಾಂಧಿನಗರದಿಂದ ಸಿಎಂ ನಿವಾಸ ಕೃಷ್ಣಾವರೆಗೂ ಪ್ರತಿಭಟನಾ ರ್ಯಾಲಿ ನಡೆಸಿ ಸಿಎಂ ನಿವಾಸ ಕಚೇರಿಗೆ ಮುತ್ತಿಗೆ ಹಾಕುವ ಪ್ಲಾನ್ ರೂಪಿಸಿದ್ರು. ಆದ್ರೆ ಪೊಲೀಸರು ರ್ಯಾಲಿಗೆ ಅನುಮತಿ ಕೊಡದ ಕಾರಣ ಕರವೇ ಕಚೇರಿ ಮುಂದೆಯೇ ಹೋರಾಟಗಾರರನ್ನು ವಶಕ್ಕೆ ಪಡೆಯಲಾಯಿತು.
ಮೇಕ್ರಿ ಸರ್ಕಲ್‌ನಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ರ್ಯಾಲಿ ಹಮ್ಮಿಕೊಂಡಿದ್ದರು. ಮರಾಠ ಅಭಿವೃದ್ಧಿ ನಿಗಮ ರಚನೆ ಖಂಡಿಸಿ ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಇನ್ನು ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಗರದಲ್ಲಿ ಮುಂಜಾನೆಯಿಂದಲೇ ವ್ಯಾಪಾರ ವಹಿವಾಟು ಆರಂಭಗೊಂಡಿತ್ತು. ನಗರದ ಪ್ರಮುಖ ರಸ್ತೆ-ಸರ್ಕಲ್‌ಗಳಲ್ಲಿ ಕನ್ನಡಪರ ಹೋರಾಟಗಾರರು ಪ್ರತಿಭಟನೆ ಮಾಡಿದರು. ಬೆಳಗ್ಗೆಯಿಂದಲೇ ಬಿಎಂಟಿಸಿ, ಮೆಟ್ರೋ, ಆಟೋ ಇನ್ನಿತರೆ ಸೇವೆಗಳಿದ್ದವು. ಮೈಸೂರು ರಸ್ತೆ, ಮೆಜೆಸ್ಟಿಕ್, ಏರ್ಪೋರ್ಟ್ ರಸ್ತೆ ಸೇರಿದಂತೆ ಹಲವೆಡೆ ಮುಂಜಾಗ್ರತಾ ಕ್ರಮವಾಗಿ ಪೋಲಿಸ್ ಭದ್ರತೆ ಕಲ್ಪಿಸಲಾಗಿತ್ತು.
ಬೆಳಗ್ಗಿನಿಂದಲೇ ನಗರ ಕೂಡ ಯಥಾಸ್ಥಿತಿಯಲ್ಲಿದ್ದು, ರಸ್ತೆಗಳಲ್ಲಿ ವಾಹನಗಳೂ ಯಥಾವತ್ತಾಗಿ ಓಡಾಡುತ್ತಿದ್ದವು. ಮಾಲ್‌ಗಳು, ಚಿತ್ರಮಂದಿರಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದವು. ಸಿಟಿ ಮಾರ್ಕೆಟ್, ಎಪಿಎಂಸಿ ಸೇರಿದಂತೆ ಎಲ್ಲವೂ ಕಾರ್ಯನಿರ್ವಹಿಸಿದವು. ಹೀಗಾಗಿ ಇಂದಿನ ಬಂದ್‌ಗೆ ಸಿಲಿಕಾನ್ ಸಿಟಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.