ಬೆಂಗಳೂರು : ಆತ ಕಾಲೇಜಿನಲ್ಲಿ ಫಸ್ಟ್ ರ‍್ಯಾಂಕ್ ವಿದ್ಯಾರ್ಥಿ. ತನ್ನ ವಿದ್ಯಾಭ್ಯಾಸದಿಂದಲೇ ಎಲ್ಲರಿಗೂ ಚಿರಪರಿಚಿತನಾಗಿದ್ದ. ಸೆಕೆಂಡ್ ಪಿಯುಸಿಯ ಎಲ್ಲಾ ಪರೀಕ್ಷೆ ಬರೆದು ಕೊನೆ ಪರೀಕ್ಷೆಗೆ ಪ್ರಿಪೇರ್ ಆಗ್ತಿದ್ದ. ಹೀಗಿದ್ದವನು ಇದ್ದಕ್ಕಿದ್ದಂತೆ ಮನೆಯಿಂದ ಕಾಣೆಯಾಗಿದ್ದ. ನಾಪತ್ತೆಯಾದ ಎರಡು ದಿನದ ಬಳಿಕ ಆ ವಿದ್ಯಾರ್ಥಿ ಮರಳು ಟ್ರಕ್ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ನಾಪತ್ತೆ: 19 ವರ್ಷದ ಸೋಮನಾಥ್ ಎಂಬಾತ ಸಾವನ್ನಪ್ಪಿದ ಯುವಕ. ಬೆಂಗಳೂರು ಗ್ರಾಮಾಂತರ ಹೊಸಕೋಟೆ ಬಳಿಯ ಸಮೃದ್ಧಿ ಕಾಲೇಜಿನಲ್ಲಿ ಸೆಕೆಂಡ್ ಪಿಯುಸಿ ವ್ಯಾಸಂಗ ಮಾಡ್ತಿದ್ದ. ಕಾಲೇಜಿನಲ್ಲಿ ಚೆನ್ನಾಗಿ ಓದುತಿದ್ದ ಸೋಮನಾಥ್ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದ. ಎಲ್ಲಾ ಪರೀಕ್ಷೆ ಮುಗಿದು ಕೊನೆಯ ಒಂದು ಪರೀಕ್ಷೆ ಬರೆಯಲು ತಯಾರಿ ನಡೆಸಿದ್ದ. ಆದ್ರೆ, ಮೇ 5ರಂದು ಪತ್ರವೊಂದನ್ನ ಬರೆದಿಟ್ಟು ಮನೆಯಿಂದ ಕಾಲ್ಕಿತ್ತಿದ್ದ.
ಏನಿದೆ ಆ ಪತ್ರದಲ್ಲಿ?: ಮೇ 5ರಂದು ಪೋಷಕರಿಗೆ ಮನೆಯಲ್ಲಿ ಪತ್ರವೊಂದು ಸಿಕ್ಕಿತ್ತು. ಆ ಪತ್ರದಲ್ಲಿ ಸ್ನೇಹಿತರು ನನ್ನ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಅವರು ಸಾಯಿಸುವುದಕ್ಕಿಂತ ಮೊದಲು ನಾನೇ ಸಾಯ್ತೀನಿ ಅಂತ್ಹೇಳಿ ಪತ್ರ ಬರೆದಿಟ್ಟು, ಮನೆಯಿಂದ ಹೋಗಿದ್ದ. ಈ ಬಗ್ಗೆ ಸೋಮನಾಥ್ ಪೋಷಕರು ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿ ಮಗನ ಶೋಧ ನಡೆಸುತ್ತಿದ್ದರು.
ಓದಿ: ಬೆಳಗಾವಿಯಲ್ಲಿ ಮಕ್ಕಳ ಜೊತೆಗೆ ಮಹಿಳೆ ಆತ್ಮಹತ್ಯೆ: ಶಾಲಾ ಸಮವಸ್ತ್ರದಲ್ಲೇ ಬಾಲಕನ ಶವಪತ್ತೆ
ಸ್ಯಾಂಡ್ ಲಾರಿಯಲ್ಲಿ ಶವ : ಮೇ 6ರಂದು ಸಂಜೆ ಮಾರತ್‌ಹಳ್ಳಿ ಬಳಿ ತಮಿಳುನಾಡಿನಿಂದ ಮರಳು ತುಂಬಿಕೊಂಡು ಬಂದಿದ್ದ ಲಾರಿಯನ್ನು ಅನ್ ಲೋಡ್ ಮಾಡುವ ವೇಳೆ ಮೃತದೇಹವೊಂದು ಪತ್ತೆಯಾಗಿತ್ತು. ಈ ಸುದ್ದಿ ಪೊಲೀಸರಿಗೆ ರವಾನಿಸಲಾಗಿತ್ತು. ಸುದ್ದಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮೃತದೇಹವನ್ನು ವಶಕ್ಕೆ ಪಡೆದು ಗುರುತು ಪತ್ತೆ ಕಾರ್ಯಕ್ಕೆ ಮುಂದಾಗಿದ್ದರು.
ಮಾಸ್ಕ್ ಮೇಲೆ ಹೆಸರು : ಅಪರಿಚಿತ ಶವ ಯಾರೆಂದು ತಿಳಿಯಲು ತಮಿಳುನಾಡು ಕ್ವಾರಿ ಮತ್ತು ಕೆಆರ್ ಪುರ ಸ್ಟ್ಯಾಂಡ್ನಲ್ಲಿ ಪೊಲೀಸರು ಎಲ್ಲರನ್ನೂ ವಿಚಾರಣೆ ಮಾಡಿದ್ದರು. ಯಾವುದೇ ಸುಳಿವು ಸಿಗದ ಹಿನ್ನೆಲೆ ಮಾಸ್ಕ್ ಮೇಲಿನ ಹೆಸರಿನಿಂದ ಪೊಲೀಸರು ತನಿಖೆ ಕೈಗೊಂಡಿದ್ದರು. ಹೊಸಕೋಟೆ ಬಳಿ ಯುವಕನ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ್ದರು. ಬಳಿಕ ನಾಪತ್ತೆಯಾಗಿದ್ದ ಸೋಮನಾಥ್ ಪೋಷಕರಿಗೆ ಈ ಶವದ ಗುರುತು ಪತ್ತೆಗೆ ಕರೆದಿದ್ದರು. ಈ ವೇಳೆ ಸೋಮನಾಥ್ ಪೋಷಕರು ಇದು ನನ್ನ ಮಗನೇ ಎಂದು ರೋದಿಸಿದ್ದಾರೆ.
ಪ್ರಕರಣ ದಾಖಲು : ಸದ್ಯ ಮಾರತ್‌ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿವಿ ರಾಮನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಉಸಿರುಗಟ್ಟಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮೇಲ್ನೋಟಕ್ಕೆ ಲಾರಿಗೆ ಮರಳು ತುಂಬುವಾಗ ಸಿಲಿಕಿರುವ ಅನುಮಾನವಿದೆ. ಈ ನಡುವೆ ಕಾಲೇಜಿನಲ್ಲಿ ಸ್ನೇಹಿತರ ಜೊತೆ ಏನಾದ್ರು ಜಗಳ ನಡೆದಿತ್ತಾ ಎಂಬುದು ತನಿಖೆ ಬಳಿಕವಷ್ಟೇ ಸ್ಪಷ್ಟತೆ ಸಿಗಬೇಕಿದೆ.