ಬೆಂಗಳೂರು: ವಿದೇಶಿ ಪ್ರಜೆಯ ಮೇಲೆ ಹಲ್ಲೆ ನಡೆಸಿ ಹಣ, ಮೊಬೈಲ್ ಹಾಗು ಇನ್ನಿತರ ವಸ್ತುಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದ ದುಷ್ಕರ್ಮಿಗಳ ಪೈಕಿ ಓರ್ವನನ್ನು ಗೋವಿಂದಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಸಯ್ಯದ್ ಇಮ್ರಾನ್ ಬಂಧಿತ. ಉಳಿದ ಮೂವರಿಗಾಗಿ ಶೋಧ ನಡೆಯುತ್ತಿದೆ.
ಪ್ರಕರಣದ ವಿವರ: ಅಸೋ ಹ್ಯಾಂಜಿಹಿ ಎಂಬವರು ನಗರದ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಪ್ರೆಸ್ಟೀಜ್ ಸೆಂಟ್ರಲ್ ಕಂಪನಿಗೆ ಕೆಲಸದ ನಿಮಿತ್ತ ಬಂದಿದ್ದರು. ಖಾಸಗಿ ಹೋಟೆಲ್ನಲ್ಲಿ ರೂಂ ಮಾಡಿಕೊಂಡು ವಾಸವಿದ್ದರು. ಜೂ.23ರಂದು ಬೆಳಗಿನ ಜಾವ 2.30ರ ಸುಮಾರಿನಲ್ಲಿ ಇವರು ಹೋಟೆಲ್‌ಗೆ ಬಂದಾಗ ಸಿಬ್ಬಂದಿಗೆ ರೂಂ ಬಾಡಿಗೆ ನೀಡುವಂತೆ ಕೇಳಿದ್ದರು. ತಾನು ಆನ್ಲೈನ್ ಮುಖಾಂತರ ಹಣ ನೀಡುವುದಾಗಿ ತಿಳಿಸಿದಾಗ ಏಕಾಏಕಿ ಇವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ವಿಚಾರವನ್ನು ಅವರು ಪೊಲೀಸರಿಗೆ ತಿಳಿಸುವುದಾಗಿ ಹೇಳಿದ್ದಾರೆ.
ಆಗ ಅದೇ ಹೋಟೆಲ್‌ನ ಬೇರೆ ರೂಂನಲ್ಲಿದ್ದ ಮೂವರು ಬಂದು ಸಹಾಯ ಮಾಡುವುದಾಗಿ ನಾಟಕವಾಡಿದ್ದಾರೆ. ಹೋಟೆಲ್ ಸಿಬ್ಬಂದಿ ವಿರುದ್ಧ ದೂರು ನೀಡಲು ಮುಂದಾಗಿದ್ದ ಆಸ್ಟ್ರೇಲಿಯಾ ಪ್ರಜೆಯನ್ನು ಪುಸಲಾಯಿಸಿ ಪೊಲೀಸ್ ಠಾಣೆಗೆ ಕರೆದೊಯ್ಯುವುದಾಗಿ ತಿಳಿಸಿ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಿಂದ ಒಂದು ಕಿ.ಮೀ ದೂರದ ಕತ್ತಲೆ ಇರುವ ಜಾಗಕ್ಕೆ ಕರೆದೊಯ್ದಿದ್ದಾರೆ.
ಬಳಿಕ ಮತ್ತೊಬ್ಬ ವ್ಯಕ್ತಿಯನ್ನು ಕರೆಸಿಕೊಂಡು ವಸ್ತುಗಳನ್ನು ಕೊಡುವಂತೆ ಬೆದರಿಸಿದ್ದಾರೆ. ಆಸ್ಟ್ರೇಲಿಯಾ ಪ್ರಜೆ ನಿರಾಕರಿಸಿದಾಗ ಹಲ್ಲೆ ನಡೆಸಿ ಅವರ ಬಳಿ ಇದ್ದ ಎರಡು ಮೊಬೈಲ್, ಪರ್ಸ್, ಎರಡು ಕ್ರೆಡಿಟ್ ಕಾರ್ಡ್, 5 ಡ್ರೈವಿಂಗ್ ಲೈಸೆನ್ಸ್, ಕಂಪನಿಯ ಕೀಗಳು, ಮೂರು ಬ್ಯಾಗ್‌ಗಳು ಮತ್ತು 4 ಸಾವಿರ ರೂ ಕಿತ್ತುಕೊಂಡು ಹೋಗಿದ್ದಾರೆ ಎಂದು ಕೇಸ್ ದಾಖಲಾಗಿದೆ.
ದರೋಡೆ ಮಾಡಿದವರಿಗೆ ಹುಡುಕಾಟ ನಡೆಸಲಾಗುತ್ತಿದೆ. ಹೋಟೆಲ್ ಸಿಬ್ಬಂದಿಯನ್ನು ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಳ್ಳಲಾಗಿದೆ. ಹೋಟೆಲ್‌ನ ಸಿಸಿಟಿವಿ ಪರಿಶೀಲಿಸಿದ್ದು ವಾಗ್ವಾದ ನಡೆದಿರುವುದು ಕಂಡುಬಂದಿದೆ ಎಂದು ಡಿಸಿಪಿ ಭೀಮಾಶಂಕರ ಗುಳೇದ್ ತಿಳಿಸಿದರು.
ಇದನ್ನೂ ಓದಿ: 3 ವರ್ಷದ ಬಾಲಕಿ ನಾಪತ್ತೆ.. ಮಗಳನ್ನು 500ರೂ.ಗೆ ಮಾರಾಟ ಮಾಡಿರುವ ಬಗ್ಗೆ ತಂದೆಯ ಆತಂಕ