ಬೆಂಗಳೂರು: ಸಂಚಾರ ದಟ್ಟಣೆ ತಡೆಯುವ ಸಲುವಾಗಿ ಬೆಂಗಳೂರಿನ ಹೊರ ಭಾಗದ ನಾಲ್ಕು ಕಡೆ ಉಪನಗರ ರೈಲ್ವೆ ಯೋಜನೆ ಕೈಗೆತ್ತಿಕೊಂಡಿದ್ದು, ಮಾರ್ಚ್ ಅಂತ್ಯದೊಳಗೆ ಒಂದು ಕಾಮಗಾರಿ ಪೂರ್ಣಗೊಳ್ಳಲಿದೆ. ನಮ್ಮ ಸರ್ಕಾರದ ಅವಧಿಯಲ್ಲೇ ಯೋಜನೆ ಮುಕ್ತಾಯವಾಗಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಪರವಾಗಿ ಯು.ಬಿ. ವೆಂಕಟೇಶ್ ಅವರು ಬೆಂಗಳೂರು ನಗರದ ಉಪನಗರ ರೈಲು ಯೋಜನೆ ಜಾರಿ ವಿಚಾರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, 148.17 ಕಿಮೀ ಉದ್ದದ ರೈಲ್ವೆ ಜಾಲವನ್ನು ಕೇಂದ್ರದ ಸಹಭಾಗಿತ್ವದಲ್ಲಿ ಕಾರ್ಯಗತಗೊಳಿಸಲಾಗಿದೆ. ನಾಲ್ಕು ಕಾರಿಡಾರ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದರು.
ಬೆಂಗಳೂರಿನಿಂದ ದೇವನಹಳ್ಳಿಯವರೆಗೆ 41.40 ಕಿ.ಮೀ., ಬೈಯಪ್ಪನಹಳ್ಳಿಯಿಂದ 25.01 ಕಿಮೀ, ಕೆಂಗೇರಿಯಿಂದ ವೈಟ್ ಫೀಲ್ಡ್ 35.52 ಕಿಮೀ, ಹೀಲಲಿಯಿಂದ ರಾಜಾನುಕುಂಟೆಯರವೆಗೂ 46.24 ಕಿ.ಮೀ ಯೋಜನೆ ಇದೆ. ಇದರಲ್ಲಿ ಮಾರ್ಚ್ ಅಂತ್ಯದೊಳಗೆ ಒಂದು ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ಸುಳ್ಳು ಪ್ರಮಾಣ ಪತ್ರದ ವಿರುದ್ಧ ಕ್ರಮ: 371ಜೆ ಅಡಿ ಸುಳ್ಳು ದಾಖಲೆ ನೀಡಿ ಅರ್ಹತಾ ಪತ್ರ ಪಡೆದವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಸದಸ್ಯ ಶಶಿಲ್ ನಮೋಷಿ ಪ್ರಶ್ನೆಗೆ ಉತ್ತರಿಸಿದ ಸಚಿವರು, 371ಜೆ ಅಡಿ ಸುಳ್ಳು ದಾಖಲೆ ನೀಡಿ ಅರ್ಹತಾ ಪತ್ರ ಪಡೆದ ಬಗ್ಗೆ ಈಗಾಗಲೇ ಎರಡು ಅರ್ಜಿ ಸಲ್ಲಿಕೆ ಆಗಿದೆ. ಬೀದರ್ನಲ್ಲಿ ಅರ್ಜಿ ಇತ್ಯರ್ಥ ಆಗಿದೆ. ಕಲಬುರಗಿ ಅರ್ಜಿ ಮಾತ್ರ ಇದೆ. ಶೀಘ್ರವಾಗಿ ಅರ್ಜಿಗಳನ್ನ ಇತ್ಯರ್ಥ ಮಾಡುವ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ ಎಂದರು.
ಇದನ್ನೂ ಓದಿ: ಹೆಸರಿಗೆ ಬಯಲು ಬಹಿರ್ದೆಸೆ ಮುಕ್ತ ಗ್ರಾಮ, ಅಲ್ಲಿ ಶೌಚಾಲಯಗಳೇ ಇಲ್ಲ.. ಸದನದ ಗಮನ ಸೆಳೆದ ಶಾಸಕ ಕಾಶೆಂಪುರ್