ಬೆಂಗಳೂರು: ಮಾಸ್ಕ್ ಹಾಕಬೇಡಿ ಅಂತಾ ನಾನು ಯಾರಿಗೂ ಹೇಳಿಲ್ಲ, ನಾವೆಲ್ಲರೂ ಸರ್ಕಾರ ರೂಪಿಸಿರುವ ಮಾರ್ಗಸೂಚಿ ಪಾಲನೆ ಮಾಡೋಣ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ಯುಟರ್ನ್ ತೆಗೆದುಕೊಂಡಿದ್ದಾರೆ.
ಕೇಂದ್ರ ಸರ್ಕಾರದಿಂದ ಕೊರೊನಾ ನಿಯಮಗಳಲ್ಲಿ ಕೆಲವನ್ನು ಸಡಿಲಿಕೆ ಮಾಡಲಾಗಿದೆ. ಕಳೆದ ಎರಡು ದಿನದ ಹಿಂದೆ ದೇಶದ ಪ್ರಧಾನಿ ನರೇಂದ್ರ ಮೋದಿ ಮಾಸ್ಕ್ ಧರಿಸುವುದು - ಬಿಡುವುದು ಅವರವರ ಭಾವಕ್ಕೆ ಬಿಟ್ಟಿದ್ದು ಎಂದು ಹೇಳಿದ್ದಾರೆ. ಅದಕ್ಕೆ ನಾನು ಮಾಸ್ಕ್ ಧರಿಸುತ್ತಿಲ್ಲ ಎಂದು ಅಥಣಿಯಲ್ಲಿ ನೀಡಿದ್ದ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಉಲ್ಟಾ ಹೊಡೆದಿದ್ದಾರೆ.
ಇದೀಗ ಮಾಸ್ಕ್ ಕುರಿತು ನೀಡಿದ್ದ ಹೇಳಿಕೆ ಟ್ರೋಲ್ ಆಗುತ್ತಿದ್ದಂತೆ ಎಚ್ಚೆತ್ತುಗೊಂಡಿರುವ ಸಚಿವ ಉಮೇಶ್ ಕತ್ತಿ ಟ್ವೀಟ್ ಮಾಡಿ ತಮ್ಮ ಹೇಳಿಕೆ ಕುರಿತು ಸಮಜಾಯಿಷಿ ನೀಡಿದ್ದಾರೆ. " ಮಾಸ್ಕ್ ಹಾಕುವ ವಿಚಾರದಲ್ಲಿ ಎಲ್ಲರೂ ತಮ್ಮ ಜವಾಬ್ದಾರಿ ಅರಿತು ಪಾಲಿಸಬೇಕು ಅನ್ನುವುದು ನನ್ನ ಹೇಳಿಕೆಯಾಗಿತ್ತು. ಮಾಸ್ಕ್ ಹಾಕಬೇಡಿ ಎಂದು ಯಾರಿಗೂ ಹೇಳಿಲ್ಲ. ನನ್ನ ಹೇಳಿಕೆಗೆ ಅಪಾರ್ಥ ಕಲ್ಪಿಸುವುದು ಬೇಡ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ಮಾಧ್ಯಮದಲ್ಲಿ ವರದಿ ಮಾಡಲಾಗಿದೆ. ನಾವೆಲ್ಲರೂ ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳನ್ನು ಪಾಲಿಸೋಣ" ಎಂದು ಕತ್ತಿ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.